ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಕೃಷಿ ಸಂಬಂಧಿತ ಮಳಿಗೆಗಳು ಪಟ್ಟಣ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ಬಹುತೇಕ ವ್ಯಾಪಾರ, ವಹಿವಾಟು ಕುಸಿತವಾಗಿದೆ.ಮಳೆ ಸುರಿಯಬೇಕಾದ ಸಮಯದಲ್ಲಿ ಮೋಡ ಕವಿದರೂ ಸಮರ್ಪಕ ಮಳೆಯಾಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಜಮೀನುಗಳಲ್ಲಿ ತೇವಾಂಶದ ಕೊರತೆ ಕಂಡುಬರುತ್ತಿದೆ. ಮುಂಗಾರು ನಿರೀಕ್ಷೆಯಲ್ಲಿ ಕೆಲವೆಡೆ ರೈತರು ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ ಬಿತ್ತನೆ ಮಾಡಿದ್ದರೂ ಮಳೆ ಕೈಕೊಟ್ಟ ಪರಿಣಾಮ ಬೆಳೆ ಒಣಗುತ್ತಿದೆ.

ವ್ಯಾಪಾರಕ್ಕೂ ಹೊಡೆತ: ಕೃಷಿ ಚಟುವಟಿಕೆಗಳು ಮಂದಗತಿಯಾಗಿರುವುದರಿಂದ ಗ್ರಾಮೀಣ ಮಾರುಕಟ್ಟೆಯಲ್ಲೂ ವ್ಯಾಪಾರ ಕುಸಿದಿದೆ. ರೈತರು ಬೀಜ, ಗೊಬ್ಬರ, ಕೃಷಿ ಉಪಕರಣಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಕೆಲಸ ಆರಂಭವಾಗದ ಹಿನ್ನೆಲೆ ಕೂಲಿ ಕಾರ್ಮಿಕರಿಗೂ ಕೆಲಸದ ಕೊರತೆ ಎದುರಾಗಿದೆ. ರೈತರ ಕೈಗೆ ಹಣ ಹರಿದುಬಾರದ ಕಾರಣ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಕೃಷಿ ಪರಿಕರಗಳ ಮಳಿಗೆಗಳು ಹಾಗೂ ಇತರ ಸಣ್ಣ ವ್ಯಾಪಾರಸ್ಥರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಕೃಷಿಯನ್ನೇ ಅವಲಂಬಿಸಿರುವ ಗ್ರಾಮೀಣ ಆರ್ಥಿಕ ವ್ಯವಸ್ಥೆ ಮಳೆಯ ಕೊರತೆಯಿಂದ ನಿಧಾನಗತಿಯತ್ತ ಸಾಗುತ್ತಿದೆ.ಕೂಲಿ ಕಾರ್ಮಿಕರಿಗೂ ಸಂಕಷ್ಟ: ಕೃಷಿ ಕೆಲಸಗಳು ಆರಂಭವಾಗದಿರುವುದರಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಉದ್ಯೋಗದ ಸಮಸ್ಯೆ ಎದುರಾಗಿದೆ. ಬಿತ್ತನೆ, ಉಳುಮೆ, ಕಳೆ ತೆಗೆಯುವಂತಹ ಕೃಷಿ ಚಟುವಟಿಕೆಗಳು ನಡೆಯಬೇಕಾದ ಸಮಯದಲ್ಲೇ ಕೆಲಸವಿಲ್ಲದಂತಾಗಿದೆ. ಇದರಿಂದ ಕೆಲವರು ನಗರ ಪ್ರದೇಶಗಳತ್ತ ಉದ್ಯೋಗ ಅರಸಿ ತೆರಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಮಳೆ ಇನ್ನಷ್ಟು ವಿಳಂಬವಾದರೆ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ವ್ಯಾಪಾರ ಇಳಿಕೆ: ಅಲಗಿನ ಪಟ್ಟಿ, ಕುಡಾ, ಕೂರಗಿ, ಬೆಳೆಸಾಲ ಕುಂಟಿ, ಯಡೆ ಕುಂಟಿ, ತಾಳ, ರಂಟಿ, ನಗಾ, ಸಲಕೆ, ಗುದ್ದಲಿ ಸೇರಿದಂತೆ ರೈತರಿಗೆ ಬೇಕಾಗುವ ಕೃಷಿ ಕೆಲಸದ ಪರಿಕರಗಳನ್ನು ಮಾರಾಟ ಮಾಡುತ್ತಿದ್ದು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿ ಸಲಕರಣೆ ಮಾರಾಟ ಕಡಿಮೆಯಾಗಿದ್ದು, ವ್ಯಾಪಾರ ಸಂಪೂರ್ಣ ಥಂಡಾ ಆಗಿದೆ ಎಂದು ಕೀರ್ತಿ ಸ್ಟೀಲ್ ಮತ್ತು ಹಾರ್ಡವೇರ್ ವ್ಯಾಪಾರಸ್ಥರಾದ ಪ್ರವೀಣ ಪೃಥ್ವಿರಾಜ ಜೈನ್ ತಿಳಿಸಿದರು.

ಒಣಗುತ್ತಿರುವ ಬೆಳೆ: ಮೇ, ಜೂನ್ ತಿಂಗಳಲ್ಲಿ ಆದ ಅಲ್ಪ ಸ್ವಲ್ಪ ಮುಂಗಾರು ಮಳೆಗೆ ಶೇಂಗಾ, ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ನಂತರ ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಬೆಳೆಗಳು ಒಣಗಲಾರಂಭಿಸಿವೆ. ಬೀಜ, ಗೊಬ್ಬರ, ಔಷಧಿ ಸಿಂಪರಣೆ, ಆಳು ಹೀಗೆ ಹತ್ತಾರು ಸಾವಿರ ಹಣ ಖರ್ಚು ಮಾಡಿದ್ದು, ಮಳೆಯ ಮುನಿಸಿನಿಂದ ದಿಕ್ಕು ತೋಚದಂತಾಗಿದೆ ಎಂದು ರೈತರಾದ ತಿಪ್ಪಣ್ಣ ಕೊಂಚಿಗೇರಿ, ಶರಣಪ್ಪ ಹರ್ಲಾಪೂರ ತಿಳಿಸಿದರು.