ಗಜೇಂದ್ರಗಡ: ಸಮಾನ ಗುಣಮಟ್ಟದ ಶಿಕ್ಷಣ ಬಡಜನರಿಗೆ ಕನಸಾಗಿಯೇ ಉಳಿದಿದ್ದು, ಶಿಕ್ಷಣದ ಖಾಸಗೀಕರಣ, ವ್ಯಾಪಾರಿಕರಣ ತೀವ್ರಗೊಂಡಿದ್ದು, ಬಡವರ ದುಡ್ಡನ್ನು ಲೂಟಿ ಮಾಡಲು ಕೋಚಿಂಗ್ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಹೇಳಿದರು.

ಪಟ್ಟಣದ ಜೋಡು ರಸ್ತೆಯಲ್ಲಿ ಗುರುವಾರ ನಡೆದ ಎಸ್‌ಎಫ್‌ಐ ೬ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರಗಳು ತನಗೆ ಬೇಕಾದಂತೆ ಕೋಚಿಂಗ್ ಮಾಫಿಯಾಗಳಿಗೆ ಅವಕಾಶ ಕೊಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಹೀಗಾಗಿ ಸರ್ಕಾರಗಳ ನೀತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ವಿದ್ಯಾರ್ಥಿಗಳ ಮೇಲೆ ನಿರಂತರ ದಾಳಿ ದಬ್ಬಾಳಿಕೆ ನಡೆಯುತ್ತಿದ್ದು, ಉನ್ನತ ಶಿಕ್ಷಣ ಕಲಿಯುತ್ತಿರುವವರ ಮೇಲೆ ಅನ್ಯಾಯ, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಗಳ ವಿರುದ್ಧ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳು ರಕ್ಷಣೆ ಮಾಡಬೇಕೆಂದು ಈ ಸಮ್ಮೇಳನ ಒತ್ತಾಯಿಸುತ್ತದೆ ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಶಿಕ್ಷಣದ ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ಚರಂಡಿಗಳನ್ನು ಸ್ವಚ್ಛತೆ ಮಾಡುವುದಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಎಂದರೆ ನೀರಾವರಿ ಯೋಜನೆಗಳಾದ ಕೃಷ್ಣ ಬಿ ಸ್ಕೀಮ್, ಎತ್ತಿನಹೊಳೆ, ಮಹದಾಯಿಯಂಥ ಯೋಜನೆಗಳ ಜಾರಿ ಜತೆಗೆ ಪಟ್ಟಣದಲ್ಲಿ ಉನ್ನತ ಸ್ನಾತಕೋತ್ತರ ಕೇಂದ್ರ ಆರಂಭ ಸೇರಿ ಅನೇಕ ಯೋಜನೆಗಳ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಜಿಲ್ಲೆಯ ಪ್ರತಿನಿಧಿಗಳು ಸಂವಾದವನ್ನು ಮಾಡಬೇಕಿದೆ ಎಂದರು. ವಕೀಲ ಎಂ.ಎಸ್. ಹಡಪದ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ ರೈತ ಮತ್ತು ವಿದ್ಯಾರ್ಥಿ ವಿರೋಧಿ ಕಾಯ್ದೆಗಳು ಜಾರಿ ಮಾಡುತ್ತಿದ್ದು, ವಿದ್ಯಾರ್ಥಿ ಸಮುದಾಯ ಸಂಘಟಿತವಾಗಬೇಕು. ಎಸ್‌ಎಫ್‌ಐ ಸಂಘಟನೆಗೂ ಗಜೇಂದ್ರಗಡ ಪಟ್ಟಣಕ್ಕೂ ಅವಿನಾಭಾವ ಸಂಬಂಧವಿದೆ. ಪಟ್ಟಣದ ಡಿಗ್ರಿ ಕಾಲೇಜು ಉಳಿವಿಗಾಗಿ ಐತಿಹಾಸಿಕ ಹೋರಾಟ, ಗ್ರಾಮೀಣ ಕೃಪಾಂಕದ ಹೋರಾಟಗಳನ್ನು ಮರೆಯಲಾಗದು ಎಂದರು.

ಕೃಷಿ ಕೂಲಿಕಾರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಬಾಲು ರಾಠೋಡ, ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಪೀರು ರಾಠೋಡ, ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿದರು. ಅನಿಲ್ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಜೋಗಿನ, ಪ್ರಸನ್ನಕುಮಾರ್, ಕವಿತಾ, ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಸುಲೋಚನಾ ಸೇರಿ ನೂರಾರು ವಿದ್ಯಾರ್ಥಿಗಳಿದ್ದರು.