ಲಕ್ಷ್ಮೇಶ್ವರ: ಪಟ್ಟಣದ ಅಗ್ನಿ ಸೋಮೇಶ್ವರ ಬಡಾವಣೆ, ಸೋಮೇಶ್ವರ ಪ್ಲಾಟ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಗುರುವಾರ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ನಿವಾಸಿಗಳು ಮನವಿ ಸಲ್ಲಿಸಿದರು.

ಈ ವೇಳೆ ನಿವೃತ್ತ ಶಿಕ್ಷಕ ಅರುಣಾಚಲ ಮಠದ ಹಾಗೂ ಯುವ ಮುಖಂಡ ಭೂಪಾಲ ಘೋಂಗಡಿ ಮಾತನಾಡಿ, ಪಟ್ಟಣದ ಅಗ್ನಿ ಸೋಮೇಶ್ವರ ನಗರ, ಯಲಿಗಾರ ಪ್ಲಾಟ್, ಮಲ್ಲಾಡದ ಕಾಲನಿಯಲ್ಲಿ ಕಳೆದ 8 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಮುಖ್ಯ ಮತ್ತು ಉಪ ರಸ್ತೆಗಳು ಹಾಳಾಗಿವೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ನೀರು ನಿಂತು ಕೆಸರು ತುಂಬಿಕೊಂಡು ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ಕಷ್ಟಪಡುವಂತಾಗಿದೆ ಎಂದರು.

ಕಳೆದ 8 ವರ್ಷಗಳಿಂದ ಇಲ್ಲಿನ ನಿವಾಸಿಗಳು ತಪ್ಪದೆ ಮನೆ ಕರ ಹಾಗೂ ನೀರಿನ ಕರ ಸೇರಿದಂತೆ ವಿವಿಧ ಕರಗಳನ್ನು ಪುರಸಭೆಗೆ ತುಂಬುತ್ತಾ ಬಂದಿದ್ದಾರೆ. ಆದರೂ ಯಾವುದೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈಗಾಗಲೇ ಹಲವಾರು ಬಾರಿ ಈ ಕುರಿತು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರೂ ಯಾವುದೇ ಕಾರ್ಯ ಕೈಗೊಳ್ಳದೆ ಇರುವುದು ದುರದೃಷ್ಟಕರವಾಗಿದೆ. ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಎಸ್.ಎ. ಬಣಗಾರ, ಜೆ.ಪಿ. ಕಡೆಮನಿ, ಡಿ.ಪಿ. ನದಾಫ, ಶ್ರೀಕಾಂತ ಕದಡಿ, ಜೆ.ಪಿ. ಕರಮಡಿ, ಎಚ್.ವೈ. ಹಂಜಗಿ, ಬಸವರಾಜ ಬೆಲಹುಣಸಿ, ನೀಲಕಂಠಪ್ಪ ದ್ಯಾಮಣಸಿ, ವಿಜಯ ಹಿರೇಮಠ, ಶ್ರೀಪಾಲ ಘೋಂಗಡಿ, ಟಿಪ್ಪುಸಾಬ್ ನದಾಫ, ಆಕಾಶ ದೇಶಪಾಂಡೆ, ನಾಗರತ್ನ ಮಠದ, ಹೇಮಾ ಕದಡಿ, ಮಂಜುಳಾ ಘೋಂಗಡಿ ಸೇರಿದಂತೆ ಅನೇಕರು ಇದ್ದರು.

ಅಭಿವೃದ್ಧಿ ಕಾಮಗಾರಿ: ಪಟ್ಟಣದ ಅಭಿವೃದ್ದಿಗಾಗಿ ಸುಮಾರು ₹1 ಕೋಟಿ ಮೊತ್ತದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ತಕ್ಷಣ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ತಿಳಿಸಿದರು.