ಶಿಗ್ಗಾಂವಿ: ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹಸಿರೆಲೆ ಗೊಬ್ಬರ ಬೆಳೆಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟರು.

ತಾಲೂಕಿನ ಕಡಳ್ಳಿ ಗ್ರಾಮದಲ್ಲಿ ಸಹಜ ಸಮೃದ್ಧ ಸಂಸ್ಥೆಯು ಭಾರತ್ ಆಗ್ರೋ ಇಕಾಲಜಿ ಫೌಂಡೇಶನ್ ಸಹಯೋಗದಲ್ಲಿ ಹಸಿರೆಲೆ ಗೊಬ್ಬರ ಬೆಳೆಗಳ ಕ್ಷೇತ್ರೋತ್ಸವ ಅವರು ಮಾತನಾಡಿದರು.

ಕಾರ್ಯಕ್ರಮದ ಪ್ರಸ್ತಾವನೆ ಮಂಡಿಸಿದ ಸಹಜ ಸಮೃದ್ಧದ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಮಾತನಾಡಿ, ರೈತರ ಗಮನ ಮಣ್ಣಿಗಿಂತ ಬೆಳೆಯ ಮೇಲೆಯೇ ಹೆಚ್ಚಾಗಿದೆ. ಆದರೆ ಉತ್ತಮ ಬೆಳೆ ಪಡೆಯಲು ಮಣ್ಣಿನ ಫಲವತ್ತತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸಾಯಿಲ್ ವಾಸು ಅವರು ಆರಂಭಿಸಿದ ಮಣ್ಣು ಸಂರಕ್ಷಣೆಯ ಕಾರ್ಯವನ್ನು ಸಹಜ ಸಮೃದ್ಧ ಮುಂದುವರಿಸಿಕೊಂಡು ಹೋಗುತ್ತಿದೆ. ಹಸಿರೆಲೆ ಗೊಬ್ಬರದ ಬೀಜಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಬೀಜೋತ್ಪಾದನೆ ಮಾಡುವ ಮೂಲಕ ಆದಾಯ ಗಳಿಸುವುದರ ಜೊತೆಗೆ ತಮ್ಮ ನೆಲದ ಫಲವತ್ತತೆಯನ್ನೂ ಹೆಚ್ಚಿಸಬಹುದು. ಕ್ಷೇತ್ರದಲ್ಲಿ ೧೩ ಬಗೆಯ ಹಸಿರೆಲೆ ಗೊಬ್ಬರ ಬೆಳೆಗಳ ಪ್ರಾತ್ಯಕ್ಷಿಕೆ ಮಾಡಲಾಗಿದೆ ಎಂದರು.

ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಬದರಿ ಪ್ರಸಾದ್ ಪಿ.ಆರ್. ಅವರು, ಸಾಂಪ್ರದಾಯಿಕವಾಗಿ ಹಸಿರೆಲೆ ಗೊಬ್ಬರದ ಸೊಪ್ಪುಗಳನ್ನು ನೆಲಕ್ಕೆ ಸೇರಿಸುವ ಪದ್ಧತಿ ನಮ್ಮಲ್ಲಿತ್ತು. ಹುರುಳಿ, ಹೆಸರು, ಉದ್ದು ಮೊದಲಾದ ದ್ವಿದಳ ಧಾನ್ಯ ಬೆಳೆಗಳನ್ನು ಮುಖ್ಯ ಬೆಳೆಗೆ ಮುನ್ನ ಬೆಳೆಸಿ, ನಂತರ ಅವುಗಳನ್ನು ಮಣ್ಣಿಗೆ ಸೇರಿಸಲಾಗುತ್ತಿತ್ತು. ಆದರೆ ಇಂದು ನಾವು ರಾಸಾಯನಿಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ ಎಂದರು.

“ಕೆಲವೇ ಬಗೆಯ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿಗೆ ಅಗತ್ಯವಿರುವ ಇತರ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿರುವುದರಿಂದ ಇಳುವರಿಯೂ ಕುಸಿಯುತ್ತಿದೆ. ಹಸಿರೆಲೆ ಗೊಬ್ಬರಗಳ ಹೆಚ್ಚಿನ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ತೇವಾಂಶವನ್ನೂ ಕಾಪಾಡಬಹುದು ಎಂದು ಅವರು ಹೇಳಿದರು.“ರಾಸಾಯನಿಕ ಗೊಬ್ಬರವಾಗಿ ಮಣ್ಣಿಗೆ ನೀಡುವ ಪೋಷಕಾಂಶಗಳ ಒಂದು ಭಾಗ ಮಾತ್ರ ಸಸ್ಯಗಳಿಗೆ ಲಭ್ಯವಾಗುತ್ತದೆ. ಉಳಿದವು ನೀರು ಮತ್ತು ಗಾಳಿಯ ಮೂಲಕ ನಷ್ಟವಾಗುವ ಸಾಧ್ಯತೆ ಇದೆ. ಹೊಲದಲ್ಲೇ ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆಸಿ ಮಣ್ಣಿಗೆ ಸೇರಿಸುವುದರಿಂದ ಪೋಷಕಾಂಶಗಳ ನಷ್ಟವನ್ನು ಕಡಿಮೆ ಮಾಡಬಹುದು ಎಂದು ಡಾ. ಬದರಿ ಪ್ರಸಾದ್ ತಿಳಿಸಿದರು.


ಶಿಕಾರಿಪುರದ ಸಹಜ ಕೃಷಿಕ ನಂದೀಶ್ ಬಿ.ಎನ್. ಮಾತನಾಡಿ, “ರಾಸಾಯನಿಕ ಗೊಬ್ಬರಗಳ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ವಾತಾವರಣದಲ್ಲಿ ಸುಮಾರು ಶೇ. ೭೮ರಷ್ಟು ಸಾರಜನಕವಿದೆ. ದ್ವಿದಳ ಧಾನ್ಯ ಬೆಳೆಗಳ ಬೇರು ಗಂಟುಗಳಲ್ಲಿರುವ ಸೂಕ್ಷ್ಮಜೀವಿಗಳು ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ. ಹೀಗಾಗಿ ದ್ವಿದಳ ಧಾನ್ಯ ಬೆಳೆಗಳು ನೈಸರ್ಗಿಕವಾಗಿ ಮಣ್ಣಿಗೆ ಸಾರಜನಕವನ್ನು ಒದಗಿಸುತ್ತವೆ ಎಂದರು.ಸಾಗುವಳಿ ಪದ್ಧತಿಯಲ್ಲಿ ಹೆಚ್ಚು ಬಳಕೆಯಾಗದ ಹಸಿರೆಲೆ ಗೊಬ್ಬರ ಬೆಳೆಗಳತ್ತ ರೈತರು ಗಮನ ಹರಿಸಬೇಕು. ಅವುಗಳ ಬೀಜಗಳನ್ನು ಸಂಗ್ರಹಿಸಿ, ಬೀಜೋತ್ಪಾದನೆ ಮಾಡಿ ಮುಂದಿನ ವರ್ಷಗಳಿಗೂ ಬಳಕೆಯಾಗುವಂತೆ ಸಂರಕ್ಷಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣ ಪ್ರಸಾದ್ ಮಾತನಾಡಿ, “ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಾಸಾಯನಿಕ ಗೊಬ್ಬರಗಳ ಲಭ್ಯತೆ ಮತ್ತು ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪರ್ಯಾಯ ಗೊಬ್ಬರಗಳತ್ತ ರೈತರು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಹಸಿರೆಲೆ ಗೊಬ್ಬರಗಳು ರೈತರ ಹೊಲದಲ್ಲೇ ದೊರೆಯುವ ‘ನಿಸರ್ಗದ ಗೊಬ್ಬರ ಕಾರ್ಖಾನೆ’ಯಂತಿವೆ. ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆಸುವ ಮೂಲಕ ಕೃಷಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು.ಕ್ಷೇತ್ರೋತ್ಸವದಲ್ಲಿ ಹೆಸರು, ದಯಾಂಚ, ಸೆಣಬು, ವೆಲ್ವೆಟ್ ಬೀನ್ಸ್, ಅಕ್ಕಿ ಅವರೆ, ಬಕ್‌ವೀಟ್, ಉದ್ದು, ಶೇಂಗಾ, ಅವರೆ, ಪಿಳ್ಳೆ ಪೆಸರು, ಹುರುಳಿ ಮತ್ತು ಸೋಯಾಬೀನ್ ಸೇರಿದಂತೆ ವಿವಿಧ ಹಸಿರೆಲೆ ಗೊಬ್ಬರ ಬೆಳೆಗಳ ಪ್ರಾತ್ಯಕ್ಷಿಕೆ ಮಾಡಲಾಯಿತು.ಕ್ಷೇತ್ರದಲ್ಲಿ ಹಸಿರೆಲೆ ಗೊಬ್ಬರ ಬೆಳೆಗಳ ಪ್ರಾತ್ಯಕ್ಷಿಕೆ ಕೈಗೊಂಡ ಮಹೇಶ ಯಲಪ್ಪ ಮಸಳಿ ಮತ್ತು ಅವರ ಪತ್ನಿ ಅವರನ್ನು ಸನ್ಮಾನಿಸಲಾಯಿತು.

ಶಾಂತಕುಮಾರ್ ಸಿ. ಕಾರ್ಯಕ್ರಮವನ್ನು ನಿರೂಪಿಸಿದರು. ಸಹಜ ಸಮೃದ್ಧದ ರವಿಕುಮಾರ್, ಮಂಜುಳಾ ಸುನಗದ್, ನೀಲಮ್ಮ, ಶಿವನಗೌಡ ಹಾಗೂ ಮಹಾದೇವಿ ಮೂಲಿಮನಿ ಉಪಸ್ಥಿತರಿದ್ದರು.