ಶಿಗ್ಗಾಂವಿ: ನಾಡು, ನುಡಿ ಹಾಗೂ ಗಡಿಯ ರಕ್ಷಣೆಯ ಜತೆಗೆ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ ಹೇಳಿದರು.
ತಾಲೂಕಿನ ಬಂಕಾಪುರ ನಗರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಬಂಕಾಪುರ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ನೂತನ ಘಟಕದ ಅಧ್ಯಕ್ಷರಾಗಿ ಪ್ರಗತಿಪರ ರೈತ ಶಂಕರಗೌಡ್ರ ಪಾಟೀಲ ಅವರನ್ನು ನೇಮಕ ಮಾಡಿ ಅವರು ಮಾತನಾಡಿದರು.ಮೂಲಭೂತ ಸೌಕರ್ಯಗಳು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಅವುಗಳನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನಲ್ಲಿ ಮಟ್ಕಾ ದಂಧೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಘಟನೆ ನಿರಂತರ ಹೋರಾಟಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಬೆಳಗಾವಿ ವಿಭಾಗೀಯ ಅಧ್ಯಕ್ಷ ಶರಣು ಗೋಡೆ ಮಾತನಾಡಿ, ಈ ಭಾಗದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಬಹುದಿನಗಳಿಂದ ಬೇಡ್ತಿ–ವರದಾ ನದಿಗಳ ಜೋಡಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ರೈತರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ಇದರಿಂದ ರೈತರಿಗೆ ನಯಾಪೈಸೆಯ ಪ್ರಯೋಜನವೂ ದೊರೆತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಿಂಗಪ್ಪ ಹರಿಜನ, ಜಿಲ್ಲಾ ಅಧ್ಯಕ್ಷ ಮಂಜುನಾಥ ದಾನಪ್ಪನವರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಾ ಪುರದ, ಜಿಲ್ಲಾ ಮಹಿಳಾ ಗೌರವಾಧ್ಯಕ್ಷೆ ವಿಜಯಾ ಬಳ್ಳಾರಿ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಪ್ರಕಾಶ ಹರಳಹಳ್ಳಿ, ತಾಲೂಕು ಅಧ್ಯಕ್ಷ ಸುರೇಶ ವನಹಳ್ಳಿ, ಗಣ್ಯ ವರ್ತಕ ಬಂಕನಗೌಡ್ರ ಚನ್ನಬಸಪ್ಪನವರ ಸೇರಿದಂತೆ ಪವಿತ್ರಾ ಮೋಟಳ್ಳಿ, ರೇಣುಕಾ ಗಡೆಣ್ಣನವರ, ಮೀನಾಕ್ಷಮ್ಮ ಗಾಜಿ, ನಾಗಪ್ಪ ತಳವಾರ, ಗದಿಗೆಪ್ಪಗೌಡ ಚನ್ನಬಸಪ್ಪನವರ, ಬಸುರಾ ದಾನಗಲ್ಲ, ಬಸವರಾಜ ಪರಮ್ಮನವರ, ಶೇಕಪ್ಪ ಹಿತ್ತಲಮನೆ, ಶಿವಾನಂದ ತಳವಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.