ಕನ್ನಡಪ್ರಭ ವಾರ್ತೆ ಕುಮಟಾ
ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ಜೀವನವೇ ಒಂದು ಸಂದೇಶ. ರೈತಪರ ಕಾಳಜಿಯ ಕಾರ್ಯಕ್ರಮಗಳಿಂದ ಅವರು ಅಜರಾಮರ ಎಂದು ತಾಪಂ ಇಒ ರಾಜೇಂದ್ರ ಭಟ್ ಹೇಳಿದರು.ತಾಪಂ ಸಭಾಭವನದಲ್ಲಿ ತಾಲೂಕಾಡಳಿತ, ಪುರಸಭೆ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾತಿಗಿಂತ ಮಿಗಿಲಾದದು ಮನಸ್ಸು ಮತ್ತು ಕೆಲಸ ಎಂದು ಹೇಳುತ್ತಿದ್ದ ಅರಸು, ನಾಯಕನಾದವನು ಜನರೊಂದಿಗೆ ಹಾಗೂ ಜನರಿಗಾಗಿ ಇರಬೇಕು ಎಂಬುದನ್ನು ಪ್ರತಿಪಾದಿಸಿ ಅದರಂತೆ ಬದುಕಿದರು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಮಾತನಾಡಿ, ಮಾಡುವ ಕೆಲಸ ಸಮಾಜಪರವಾಗಿರಬೇಕು, ಧನಾತ್ಮಕ ವಿಚಾರಗಳನ್ನು ಮಾಡುವ ಕಾರ್ಯದಲ್ಲಿ ಸದಾ ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಮಾದರಿಯಾಗಿದ್ದ ಡಿ.ದೇವರಾಜ ಅರಸು, ಎಲ್ಲೂ ಸಲ್ಲದ ಸ್ಥಿತಿಯಲ್ಲಿದ್ದ ಹಿಂದುಳಿದ ವರ್ಗಗಳಲ್ಲಿ ವಿಶ್ವಾಸ ಮತ್ತು ಸ್ಥೈರ್ಯ ತುಂಬಿದ ಮಹಾನ್ ವ್ಯಕ್ತಿ ಎಂದರು.
ವಿಶೇಷ ಉಪನ್ಯಾಸಕರಾಗಿ ಶಿಕ್ಷಕ ಮಹೇಶ ಎಸ್. ಕಲ್ಯಾಣಕರ ಮಾತನಾಡಿದರು. ಆರ್.ಎಲ್. ಭಟ್ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೀತಾ ಗೌಡ, ಸಮಾಜ ಕಲ್ಯಾಣಾಧಿಕಾರಿ ಭಾರತಿ ಆಚಾರ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಪಶುಸಂಗೋಪನಾ ಅಧಿಕಾರಿ ಡಾ. ವಿಶ್ವನಾಥ ಹೆಗಡೆ ಉಪಸ್ಥಿತರಿದ್ದರು.
ತಾಲೂಕಿನ ೮ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಎಸ್‌ಎಸ್‌ಎಲ್‌ಸಿ, ಸಾಧಕ ವಿದ್ಯಾರ್ಥಿಗಳಾದ ಮಂಜುಳಾ ಮರಾಠಿ, ಪ್ರತೀಕ್ಷಾ ನಾಯ್ಕ, ರಘುಪತಿ ಮರಾಠಿ, ಚಂದ್ರಶೇಖರ ಮರಾಠಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಾದ ಪೂಜಾ ನಾಯ್ಕ, ಅಂಕಿತಾ ಮರಾಠಿ, ಗೌರಿ ಗೌಡ, ಕಾರ್ತಿಕ ಜಿ. ನಾಯ್ಕ, ಪೂಜಾ ಗೌಡ, ಕೃತ್ತಿಕಾ ಗೌಡ, ವನಿತಾ ಮರಾಠಿ, ಹರ್ಷ ನಾಯ್ಕ, ಭುವನ ನಾಯ್ಕ, ರೂಪಾ ನಾಯ್ಕ, ಸಂಜನಾ ನಾಯ್ಕ, ಪ್ರಜ್ವಲ್ ಗೌಡ, ಮನೋಜ ನಾಯ್ಕ ಅವರಿಗೆ ಪಾರಿತೋಷಕವಿತ್ತು ಗೌರವಿಸಲಾಯಿತು.
ದಾಮಿನಿ ಸಂಗಡಿಗರು ಸ್ವರಚಿತ ಕವನ ವಾಚಿಸಿದರು. ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಗಜಾನನ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕ ಕೃಷ್ಣ ದೇವಾಡಿಗ ನಿರ್ವಹಿಸಿದರು.