ಪ್ರತಿಯೊಬ್ಬ ತಾಯಿಯೂ ಮಹಾರಾಜ ಛತ್ರಪತಿ ಶಿವಾಜಿ ತಾಯಿಯಾಗಬೇಕು: ಸ್ಟೆಲ್ಲಾ ವರ್ಗೀಸ್

KannadaprabhaNewsNetwork | Updated : Feb 21 2025, 01:03 PM IST

ಸಾರಾಂಶ

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮತ್ತು ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ನೆರವೇರಿತು.

 ಪುತ್ತೂರು :  ಮಹಾರಾಜ ಛತ್ರಪತಿ ಶಿವಾಜಿ ಅವರ ತಾಯಿ ಜೀಜಾಬಾಯಿ ತನ್ನ ಪುತ್ರನಿಗೆ ಎಳವೆಯಲ್ಲಿಯೇ ಭೂಮಿ ಪ್ರೀತಿ ಮತ್ತು ಜವಾಬ್ದಾರಿ ಬಿತ್ತುವ ಮೂಲಕ ಅವರನ್ನು ಸ್ವಾಭಿಮಾನಿಯನ್ನಾಗಿ ಬೆಳೆಸಿದ್ದರು. ಪ್ರತಿ ಹೆತ್ತವರೂ ತಮ್ಮ ಮಕ್ಕಳನ್ನು ಸ್ಪರ್ಧೆಗಾಗಿ ಬೆಳೆಸದೆ, ಜವಾಬ್ದಾರಿ ತಿಳಿಸುವ ತಳ ಮಟ್ಟದ ಮೌಲ್ಯವನ್ನು ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ತಾಯಿಯೂ ತಮ್ಮ ಮಕ್ಕಳಿಗೆ ಶಿವಾಜಿಯ ತಾಯಿಯಾಗಬೇಕು ಎಂದು ಪುತ್ತೂರು ಉಪವಿಭಾಗದ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದ್ದಾರೆ.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಮತ್ತು ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಮತ್ತು ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಬದುಕಿನ ಎಲ್ಲ ಅವಧಿಯಲ್ಲಿಯೂ ಶಿಕ್ಷಣ ಪಡೆಯಲು ಅವಕಾಶವಿದ್ದು, ಓದುವುದಕ್ಕೆ ವಯಸ್ಸು ಎಂಬುದಿಲ್ಲ. ಶಿಕ್ಷಣದ ಜೊತೆಗೆ ನಾವು ಮೌಲ್ಯಾಧಾರಿತ ಬದುಕು ನಡೆಸಬೇಕು ಎಂದರು.

ಶಿವಾಜಿ ಮತ್ತು ಸರ್ವಜ್ಞನ ಬಗ್ಗೆ ಸಂಸ್ಮರಣಾ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕಿ ಶುಭಲತಾ ಹಾರಾಡಿ, ಕುಂಬಾರ ವಂಶದ ಹೆಮ್ಮೆಯ ಕುಡಿಯಾದ ಸರ್ವಜ್ಞನ ವಚನ ಮಾಣಿಕ್ಯವಾಗಿದೆ. ಜ್ಞಾನವೇ ಪರಮಾತ್ಮನ ಅರಿವು ಮತ್ತು ಪರಮ ಸತ್ಯ ಎಂದು ಅಥೈಸಿದ ಸರ್ವಜ್ಞನ ವಚನವನ್ನು ಅರ್ಥೈಸಲು ಆಳಕ್ಕೆ ಇಳಿದು ವಿಚಾರ ಮಾಡಬೇಕಾಗಿದೆ. ನಮ್ಮೊಳಗಿನ ಅಂತರಂಗದ ಹೊರತು ಅನ್ಯ ಶಿಕ್ಷಣವಿಲ್ಲ ಎಂಬುದನ್ನು ಸರ್ವಜ್ಞ ತಿಳಿಸಿದ್ದಾರೆ. ಅವರು ಬ್ರಹ್ಮಾಂಡ ರಹಸ್ಯವನ್ನು ತನ್ನ ೩ ಸಾಲಿನ ಪದ್ಯದಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಸರ್ವಜ್ಞ ಹೇಳಿರುವಂತೆ ನಮ್ಮೊಳಗಿರುವ ದೇವರನ್ನು ಗುರುತಿಸುವ ಕೆಲಸವಾದಲ್ಲಿ ಬದುಕು ಸ್ವರ್ಗವಾಗಲಿದೆ ಎಂದರು.

ಛತ್ರಪತಿ ಶಿವಾಜಿ ಹೆಸರು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಶಿವಾಜಿ ತಾಯಿ ಜೀಜಾಬಾಯಿ ಎಲ್ಲಾ ತಾಯಿಯಂದಿರಿಗೂ ಆದರ್ಶ ಮತ್ತು ಪ್ರೇರಣೆಯಾಗಿದ್ದಾರೆ. ಜೀಜಾಬಾಯಿ ತನ್ನ ಪುತ್ರನಿಗೆ ಗರ್ಭದಲ್ಲಿರುವ ಸಂದರ್ಭದಲ್ಲಿಯೇ ಸಂಸ್ಕಾರ ನೀಡುವ ಕೆಲಸವನ್ನು ಮಾಡಿದ್ದರು. ಶಿವಾಜಿ ಮಹಾರಾಜರು ಪ್ರತಿಯೊಬ್ಬ ಭಾರತೀಯರ ಹೃದಯ ಸಾಮ್ರಾಜ್ಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮತ್ತಿತರರು ಇದ್ದರು.

ತಾಲೂಕು ಕಚೇರಿಯ ಸಿಬ್ಬಂದಿ ದಯಾನಂದ ಸ್ವಾಗತಿಸಿ, ವಂದಿಸಿದರು.

Share this article