ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳ ಅರಿವು ಅಗತ್ಯ

KannadaprabhaNewsNetwork |  
Published : Dec 20, 2024, 12:48 AM IST
 | Kannada Prabha

ಸಾರಾಂಶ

ಮಾನವ ಹಕ್ಕುಗಳ ಬಗ್ಗೆ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ವಿವಿಧ ಕಾರ್ಯಕ್ರಮ, ಶಿಬಿರ ಮತ್ತು ಕಾರ್ಯಾಗಾರಗಳ ಮುಖಾಂತರ ಹೆಚ್ಚಿನ ಅರಿವು ಮೂಡಿಸಬೇಕು. ಈ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಕಾರಾತ್ಮಕವಾಗಿ ಕೈ ಜೋಡಿಸಬೇಕು. ಯಾರ ಹಕ್ಕುಗಳನ್ನು ಯಾರೂ ಕಸಿಯುವಂತಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರತಿ ವ್ಯಕ್ತಿಯೂ ತನಗಿರುವ ಹಕ್ಕುಗಳನ್ನು ಅರಿತುಕೊಂಡಾಗ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ತಿಳಿಸಿದರು.

ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ-2024ರ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಸಹಜವಾಗಿ ಸಮಾನ‌ ಮಾನವ ಹಕ್ಕುಗಳಿವೆ. ಕೆಲವರು ಇನ್ನೊಬ್ನರ ಹಕ್ಕುಗಳನ್ನು ಕಸಿದು ಹಕ್ಕುಗಳ ಉಲ್ಲಂಘನೆ ಮಾಡುತ್ತಾರೆ. ಯಾರ ಹಕ್ಕುಗಳನ್ನು ಯಾರೂ ಕಸಿಯುವಂತಿಲ್ಲ ಎಂದರು.ಜನತೆಗೆ ಅರಿವು ಮೂಡಿಸಬೇಕು

ಮಾನವ ಹಕ್ಕುಗಳ ಬಗ್ಗೆ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ವಿವಿಧ ಕಾರ್ಯಕ್ರಮ, ಶಿಬಿರ ಮತ್ತು ಕಾರ್ಯಾಗಾರಗಳ ಮುಖಾಂತರ ಹೆಚ್ಚಿನ ಅರಿವು ಮೂಡಿಸಬೇಕು. ಈ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಕಾರಾತ್ಮಕವಾಗಿ ಕೈ ಜೋಡಿಸಬೇಕು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿನ ಜೊತೆಗೆ ಒಂದಿಷ್ಟು ಮೂಲಭೂತ ಹಕ್ಕುಗಳಿವೆ. ಪ್ರತಿಯೊಬ್ಬರಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಹಕ್ಕಿಗೆ ಚ್ಯುತಿ ತರಬಾರದು

ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮಾತನಾಡಿ, ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ. ನಿರ್ಭೀತಿಯಿಂದಿರುವುದು, ಹಕ್ಕುಗಳ ಕಸಿದುಕೊಳ್ಳುವುದರಿಂದ ಮುಕ್ತಿ ಪಡೆಯುವುದು ಹಾಗೂ ನಮ್ಮ ಎಲ್ಲ ಸಾಮರ್ಥ್ಯಗಳ ಉಪಯೋಗ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಪಡೆಯುವುದು ಮನುಷ್ಯನ ಮೂಲಭೂತ ಹಕ್ಕಾಗಿವೆ. ಜೊತೆಗೆ ಇನ್ನೊಬ್ಬರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರು.

ಕಿರುಹೊತ್ತಿಗೆ ಬಿಡುಗಡೆ

ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರು ಮಾನವ ಹಕ್ಕುಗಳ ಜಾಗೃತಿ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರತಂದಿರುವ ಕಿರುಹೊತ್ತಿಗೆ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ರವರು ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ನೆರೆದಿದ್ದವರಿಗೆ ಬೋಧಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಎಸಿ ಡಿ.ಹೆಚ್.ಅಶ್ವಿನ್, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮುನಿಕೆಂಪೇಗೌಡ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ. ವಿಶ್ವನಾಥ್‌, ಮಾನವ ಹಕ್ಕುಗಳ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಕೃಷ್ಣಪ್ಪ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಟಿ. ಪ್ರಸನ್ನ ಕುಮಾರ್ ರವರ ಕಲಾತಂಡ ಹಾಡುಗಳ ಮೂಲಕ ಮಾನವ ಹಕ್ಕುಗಳ ಪ್ರಾಮುಖ್ಯತೆ ಸಾರಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ