ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ಕ್ರೀಡೆ ಪ್ರಮುಖ ಚಟುವಟಿಕೆಯನ್ನಾಗಿಸಿಕೊಂಡು ಗುರುತಿಸಿಕೊಳ್ಳಬೇಕು. ಇದರಿಂದ ಮುಂದಿನ ಉತ್ತಮ ನಾಗರಿಕರನ್ನಾಗಿ ರೂಪಿಸಿಕೊಳ್ಳಲು ಸಹಾಯ ಆಗುತ್ತದೆ ಎಂದು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಶರಣಬಸಪ್ಪ ಸಂಗಳದ ಹೇಳಿದರು.ನವನಗರದ ಶ್ರೀ ಕಾಳಿದಾಸ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ನಡೆದ ವಾರ್ಷಿಕ ಶಾಲಾ ಕ್ರೀಡಾಕೂಟ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು. ತಮಗೆ ಇಷ್ಟವಾದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದರು. ನಾವು ಚಿಕ್ಕವರಾಗಿದ್ದಾಗ ನಮಗೆ ಯಾವುದೇ ಕ್ರೀಡೆಗಳಲ್ಲಿ ಸಾಧಿಸಲು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ ನಿಮಗೆ ಈಗ ಇಷ್ಟೆಲ್ಲಾ ಅವಕಾಶವಿದ್ದು ಹೆಚ್ಚಿನದನ್ನು ಸಾಧಿಸಲು ಉತ್ತಮ ಪ್ರೋತ್ಸಾಹವನ್ನು ಶಾಲಾ ಶಿಕ್ಷಕರು ಹಾಗೂ ಪಾಲಕರು ಮಾಡುತ್ತಿದ್ದಾರೆ. ಇದರ ಸದುಪಯೋಗ ಪಡೆದುಕೊಂಡು ಮುಂದಿನ ಜೀವನದ ಹಂತದಲ್ಲಿ ಉತ್ತಮ ನಾಗರಿಕರಾಗಲು ಪ್ರಯತ್ನಿಸಿ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಳಿದಾಸ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಬಿ.ಪೂಜಾರ, ನಾವು ಕೂಡ ಅಪ್ಪಟ ಗ್ರಾಮೀಣ ಪ್ರತಿಭೆಯಿದ್ದರು. ಇವತ್ತಿನ ಯುಗದಲ್ಲಿ ಸಂಪೂರ್ಣ ಬದಲಾಗಿ ಹೋಗಿದೆ. ಶನಿವಾರಕ್ಕೊಮ್ಮೆ ಎಂಡಿ ಫ್ರೀಡ್ ಬಂತಂದ್ರೆ ಸಾಕು ನಮಗೆ ಅತ್ಯಂತ ಖುಷಿಯಾಗುತ್ತಿತ್ತು. ಇದನ್ನ ಇವತ್ತಿನ ಶಿಕ್ಷಕರು ಮಾಡುತ್ತಿದ್ದು ಖುಷಿ ನೀಡಿದ್ದು. ಉತ್ತಮ ಬೋಧನೆಯಿಂದ ಈ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇಂತಹ ಒಳ್ಳೆಯ ಕಾರ್ಯಗಳು ಆಗಾಗ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರಲಿ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಸ್.ಪಾಟೀಲ್ ಮಾತನಾಡಿ, ಸಂಸ್ಥೆ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಎಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲ್ಲಬೇಕೆಂದರು. ಇದರಿಂದ ಮುಂದೆ ಹೆಚ್ಚೆಚ್ಚು ಸಾಧಿಸಲು ಸಹಾಯವಾಗುತ್ತದೆ. ಹಾಗಾಗಿ ಯಾರು ಕೂಡ ಯಾವುದೇ ಕ್ರೀಡೆಯಾಗಲಿ ಹಿಂಜರಿಯದೆ ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಲ್ಲಿ ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಟಿ.ಬಿ.ಕುರುಬರ, ಪದಾಧಿಕಾರಿಗಳಾದ ಎಸ್.ವೈ.ನೀಲಾರ, ಎಸ್.ಎಸ್.ದೊಡಮನಿ, ವಿ.ಎ.ಪಾಟೀಲ್, ಎಲ್.ವಿ.ವಿರಕ್ತಿಮಠ, ಡಿ.ಆರ್.ಮೇಟಿ, ಡಿಗ್ರಿ ಕಾಲೇಜ್ ಪ್ರಾಂಶುಪಾಲ ಆರ್.ಎಫ್.ಚವ್ಹಾಣ, ಕಾಳಿದಾಸ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮೇಲ್ವಿನ್ ಬಾಬಿ ಮರ್ಜಿ, ದೈಹಿಕ ಶಿಕ್ಷಕ ಶ್ರೀಶೈಲ್ ಬೋಳರಡ್ಡಿ ಸೇರಿ ಇತರರು ಇದ್ದರು. ವಿದ್ಯಾರ್ಥಿನಿ ರಾಶಿ ರಜಪೂತ ನಿರೂಪಿಸಿ, ಶಿಕ್ಷಕಿ ಕೀರ್ತಿ ವಂದಿಸಿದರು.