ಎಲ್ಲರೂ ಸೇರಿ ಕನ್ನಡವನ್ನು ಉಳಿಸಬೇಕಿದೆ

KannadaprabhaNewsNetwork |  
Published : Oct 13, 2025, 02:00 AM IST

ಸಾರಾಂಶ

ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಪಸರಿಸುವ ಮೂಲಕ ಮತ್ತಷ್ಟು ಪ್ರವರ್ಧಮಾನಕ್ಕೆ ತರುವ ಕೆಲಸವನ್ನು ಮಾಡಬೇಕು ಎಂದು ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಎಲ್ಲ ಕ್ಷೇತ್ರಗಳಲ್ಲೂ ಪಸರಿಸುವ ಮೂಲಕ ಮತ್ತಷ್ಟು ಪ್ರವರ್ಧಮಾನಕ್ಕೆ ತರುವ ಕೆಲಸವನ್ನು ಮಾಡಬೇಕು ಎಂದು ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿ ಕರೆ ನೀಡಿದರು.

ನಗರದ ಸಿದ್ದಿವಿನಾಯಕ ಭವನದಲ್ಲಿ ಗೋಸಲ ವೆಂಚರ್ಸ್, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಸ್ಕತ್‌ನಲ್ಲಿ ನಡೆಯಲಿರುವ 3ನೇ ವಿಶ್ವ ಕನ್ನಡ ಹಬ್ಬದ ಪ್ರವಾಸ ಬಿತ್ತಿ ಪತ್ರ ಬಿಡುಗಡೆ ಹಾಗೂ ಗೋಸಲ ಪ್ರವಾಸ ನಿಧಿ ಯೋಜನೆ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಎಲ್ಲ ಕಾರ್ಪೋರೇಟ್ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಆಂಗ್ಲಭಾಷೆ ವ್ಯಾಮೋಹ ಹೆಚ್ಚಾಗಿದೆ. ಇದನ್ನು ಗಮನಿಸುತ್ತಿದ್ದರೆ ಎಲ್ಲೆಡೆ ಇಂಗ್ಲಿಷ್ ವ್ಯಾಮೋಹ ಪ್ರವರ್ಧಮಾನಕ್ಕೆ ಬರುತ್ತಿದೆ. ಹಾಗಾಗಿ ನಾವೆಲ್ಲರೂ ಜತೆಗೂಡಿ ಕನ್ನಡ ಭಾಷೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ತರುವ ಕೆಲಸವನ್ನು ಮಾಡಬೇಕಿದೆ ಎಂದರು.

ವಿದೇಶಗಳಲ್ಲಿ ಕನ್ನಡ ನಾಡು-ನುಡಿ ಪಸರಿಸುವ ಕೆಲಸವನ್ನು ಗೋಸಲ ವೆಂಚರ್ಸ್ ಸಂಸ್ಥೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ವಿದೇಶಗಳಲ್ಲಿ ಕನ್ನಡ ಭಾಷೆಯ ಕಂಪನ್ನು ಪಸರಿಸುತ್ತಿರುವ ಈ ಸಂಸ್ಥೆಯ ಶ್ರಮ ಅಪಾರವಾಗಿದೆ. ಒಮನ್ ದೇಶ ಮಸ್ಕತ್‌ನಲ್ಲಿ 3ನೇ ವಿಶ್ವ ಕನ್ನಡ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಸಂತೋಷಕರ ಸಂಗತಿ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಶಿವಕುಮಾರ್ ನಾಗರನವಿಲೆ ಮಾತನಾಡಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ 3ನೇ ವಿಶ್ವ ಕನ್ನಡ ಹಬ್ಬವನ್ನು ಮಸ್ಕತ್‌ನಲ್ಲಿ ಆಯೋಜನೆ ಮಾಡಿದೆ. ಈ ಪ್ರವಾಸದ ಬಿತ್ತಿ ಪತ್ರವನ್ನು ಶ್ರೀಗಳು ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.

3ನೇ ವಿಶ್ವ ಕನ್ನಡ ಹಬ್ಬದಲ್ಲಿ ಸಾಧಕರಿಗೆ ವಿಶ್ವ ಮಾನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಹಾಗೂ ಅತಿ ಸಾಧನೆ ಮಾಡಿರುವ ಮಹಾನ್ ವ್ಯಕ್ತಿಗೆ ವಿಶ್ವ ಮಾನವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದರು.

ಕಳೆದ ಬಾರಿ ಬುಡಕಟ್ಟು ಕಲಾವಿದರನ್ನು ಕಾಡಿನಿಂದ ಕರೆದುಕೊಂಡು ಹೋಗಿ ಅವರ ಪ್ರತಿಭೆಯನ್ನು ಪ್ರದರ್ಶಿಸಲಾಯಿತು. ಈ ಬಾರಿ 15 ಜನ ಅಂಧರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ ಎಂದು ಅವರು ಹೇಳಿದರು.

ಗೋಸಲ ವೆಂಚರ್ಸ್ ಮಾಲೀಕ ವಿಕಾಸ್ ಮಾತನಾಡಿ, ಒಮನ್ ದೇಶ ಮಸ್ಕತ್‌ನಲ್ಲಿ ನಡೆಯುತ್ತಿರುವ 3ನೇ ವಿಶ್ವ ಕನ್ನಡ ಹಬ್ಬದ ಪ್ರವಾಸ ಪಾಲುದಾರರಾಗಿದ್ದೇವೆ. ಕನ್ನಡ ಸೇವೆ ಪ್ರಪಂಚದಾದ್ಯಂತ ಪಸರಿಸಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಮಾಡುತ್ತಿದ್ದು, ಅಲ್ಲಿ ನೆಲೆಸಿರುವ ಸುಮಾರು 1500 ಕ್ಕೂ ಅಧಿಕ ಮಂದಿ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೆ.ಎಸ್. ಚನ್ನಬಸಪ್ಪ, ವೀಣಾ, ಗೋಸಲ ವೆಂಚರ್ಸ್ನ ವಿಕಾಸ್, ವೆಂಕಟೇಶ್, ನಂದನ, ಶೃತಿ ವಿಕಾಸ್, ಮಂಗಳಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು