ಬಳ್ಳಾರಿ: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಹೊಸದಾಗಿ ನೋಂದಾಯಿಸಿಕೊಳ್ಳಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಯುವ ಮತದಾರರು ಇದರ ಪ್ರಯೋಜನ ಪಡೆದಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಅಂಗವಾಗಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಿಂದ ಆಯೋಜಿಸಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.ಮೇ 7ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಪಾಲ್ಗೊಂಡು ಹಕ್ಕು ಚಲಾಯಿಸಬೇಕು. ಮತದಾನ ಮಾಡುವುದು ಜವಾಬ್ದಾರಿಯುತ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಮತದಾನ ಒಂದು ಮೂಲಭೂತ ಹಕ್ಕು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಭಾಗವಹಿಸಿ ಮತ ಚಲಾವಣೆ ಮಾಡಿದಾಗ ಮಾತ್ರ ಪ್ರಜಾ ಪ್ರಭುತ್ವದಲ್ಲಿನ ನಮ್ಮ ಹಕ್ಕುಗಳ ಪರವಾಗಿ ಪ್ರಶ್ನಿಸಲು ಅರ್ಹರಾಗಿರುತ್ತೇವೆ ಎಂದರು.
ಎಡಿಸಿ ಮೊಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ಹೇಮಂತ್, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಬಳ್ಳಾರಿ ತಹಸೀಲ್ದಾರ್ ಗುರುರಾಜ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಬಿ.ಉಮಾದೇವಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಮತದಾನ ಜಾಗೃತಿ ಸೈಕಲ್ ಜಾಥಾವು ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ-ಹೆಚ್.ಆರ್.ಗವಿಯಪ್ಪ ವೃತ್ತ-ಕೋಟೆ ಪ್ರದೇಶ(ಶ್ರೀಮೇಧಾ ಕಾಲೇಜು ಮುಂಭಾಗ)-ಮೊದಲನೇ ರೈಲ್ವೇ ಗೇಟ್-ಸುಧಾ ಕ್ರಾಸ್-ಇನ್‍ಫ್ಯಾಂಟರಿ ರಸ್ತೆ-ಎಸ್‍ಪಿ ವೃತ್ತದ ಮೂಲಕ ದುರ್ಗಮ್ಮ ದೇವಸ್ಥಾನದ ಆವರಣಕ್ಕೆ ತಲುಪಿ ಕೊನೆಗೊಂಡಿತು.