ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರತಿಯೊಬ್ಬರೂ ನೈತಿಕವಾಗಿ ಮತ ಚಲಾಯಿಸಿದರೆ ದೇಶದ ಅಭಿವೃದ್ಧಿ ಮತ್ತಷ್ಟು ಎತ್ತರಕ್ಕೇರಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅಭಿಪ್ರಾಯ ವ್ಯಕ್ತಪಡಿಸಿದರು.ಗುರುವಾರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಇವರ ಸಂಯುಕ್ತಾಶ್ರಯದಲ್ಲಿ ಆಯೊಜಿಸಿದ್ದ ‘14ನೇ ರಾಷ್ಟ್ರೀಯ ಮತದಾರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮುಖ್ಯ ಆಧಾರವೇ ಚುನಾವಣಾ ಪ್ರಕ್ರಿಯೆಯಾಗಿದೆ. ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ಅಭಿಪ್ರಾಯವನ್ನು ಮತದಾನದ ಮೂಲಕ ತಿಳಿಸಬಹುದು, ಅಂತಹ ಅಭಿಪ್ರಾಯವನ್ನೇ ನಾವು ನೀಡದಿದ್ದರೆ ಜನಪ್ರತಿನಿಧಿಗಳಿಂದ ಉತ್ತಮ ಅಭಿವೃದ್ಧಿ ಮತ್ತು ಸೇವೆಯನ್ನು ನಿರೀಕ್ಷಿಸಲು ಆಗಲ್ಲ. ನಾನು ಮತ ಚಲಾಯಿಸುವ ಜನಪ್ರತಿನಿಧಿ ದೇಶಕ್ಕೆ ಯಾವ ರೀತಿ ಉತ್ತಮ ಸೇವೆ ನೀಡಬಲ್ಲ ಎಂಬ ಏಕೈಕ ಮಾನದಂಡ ನಿರ್ಣಯಿಸಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿದರೆ ಮುಂದಿನ 5 ವರ್ಷದಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿ ಹೊಂದುತ್ತದೆ ಎಂಬುದು ನನ್ನ ಅಭಿಪ್ರಾಯ. ಅಂತಹ ಉತ್ತಮ ಬದಲಾವಣೆಗೆ ನಿಮ್ಮ ಒಂದು ಮತ ಕಾರಣವಾಗಲಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬುವುದು ‘14ನೇ ರಾಷ್ಟ್ರೀಯ ದಿನಾಚರಣೆಯ’ ಘೋಷವಾಕ್ಯವಾಗಿದೆ. ಇದರ ಅರ್ಥವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮತದಾರರು ಅರಿಯಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಮತದಾನದ ಪ್ರಮಾಣದಲ್ಲಿ ಜಿಲ್ಲೆಯನ್ನು ಅಗ್ರಸ್ಥಾನಕ್ಕೇರಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಜಿಪಂ ಸಿಇಒ ಪ್ರಕಾಶ್ ಜಿ. ಟಿ. ನಿಟ್ಟಾಲಿ ಮಾತನಾಡಿ, ವಿವಿಧ ಶಾಲಾ ಕಾಲೇಜುಗಳಲ್ಲಿ, ಜನಸಂದಣಿ ಸ್ಥಳಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ನೈತಿಕ ಮತದಾನ ಮಾಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮತದಾನದ ಮಹತ್ವದ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಾಕುಮಾರಿ ನೆರೆದಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅತ್ಯುತ್ತಮ ಸೇವೆ ಸಲ್ಲಿಸಿದ ಮತಗಟ್ಟೆ ಹಂತದ ಅಧಿಕಾರಿಗಗಳಿಗೆ ಗಣ್ಯರು ಗೌರವಿಸಿದರು, ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ,ಪ್ರಬಂಧ, ಬಿತ್ತಿಪತ್ರ ರಚನೆ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಜಿಲ್ಲಾಡಳಿತದ ಮುಂಭಾಗದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಪ್ರಾಯೋಗಿಕ ಬಳಕೆಯ ಬಗ್ಗೆ ಯುವ ಮತದಾರರಿಗೆ ಅರಿವು ಮೂಡಿಸಲಾಯಿತು.ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಸಿಇಒ ಮಂಜುನಾಥ್, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.