ಮತದಾನ ಪ್ರತಿಯೊಬ್ಬರ ಹಕ್ಕು: ಎಸ್. ನಾಗಶ್ರೀ

KannadaprabhaNewsNetwork | Published : Jan 26, 2024 1:45 AM

ಸಾರಾಂಶ

ಮತ ಚಲಾವಣೆ ನಮ್ಮ ಹಕ್ಕು. ಆದರೆ ಮತ ಚಲಾಯಿಸಿ ಎಂದು ಹೇಳಬೇಕಾದ ಸನ್ನಿವೇಶ ಬಂದಿದೆ. 18 ವರ್ಷ ಪೂರ್ಣಗೊಂಡ ನಂತರ ವ್ಯಕ್ತಿಗೆ ತಿಳುವಳಿಕೆ ಬರುವ ಕಾರಣ ಉತ್ತಮ ಜನಪ್ರತಿನಿಧಿಯನ್ನು ಚುನಾಯಿಸಬಲ್ಲ ಎಂದು ಸಂವಿಧಾನದಲ್ಲಿ ವಯಸ್ಸಿಗೆ ಮಹತ್ವ ನೀಡಿ ಪವಿತ್ರ ಮತದಾನದ ಹಕ್ಕು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹದಿನೆಂಟು ವರ್ಷ ಮೀರಿದ ಪ್ರತಿಯೊಬ್ಬ ಪ್ರಜೆಗೆ ಮತದಾನದ ಹಕ್ಕು ನೀಡಲಾಗಿದೆ. ಯುವಕ-ಯುವತಿಯರು ಹದಿನೆಂಟು ವರ್ಷ ಮೀರಿದ ನಂತರ ವಾಹನ ಚಲಾಯಿಲಸು ಡ್ರೈವಿಂಗ್ ಲೈಸೆನ್ಸ್ ಪಡೆಯುವ ತವಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಕಡ್ಡಾಯ ಮತದಾನ ಮಾಡುವುದಕ್ಕೂ ಇರಲಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ನಾಗಶ್ರೀ ಸಲಹೆ ನೀಡಿದರು.

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತ ಚಲಾವಣೆ ನಮ್ಮ ಹಕ್ಕು. ಆದರೆ ಮತ ಚಲಾಯಿಸಿ ಎಂದು ಹೇಳಬೇಕಾದ ಸನ್ನಿವೇಶ ಬಂದಿದೆ. 18 ವರ್ಷ ಪೂರ್ಣಗೊಂಡ ನಂತರ ವ್ಯಕ್ತಿಗೆ ತಿಳುವಳಿಕೆ ಬರುವ ಕಾರಣ ಉತ್ತಮ ಜನಪ್ರತಿನಿಧಿಯನ್ನು ಚುನಾಯಿಸಬಲ್ಲ ಎಂದು ಸಂವಿಧಾನದಲ್ಲಿ ವಯಸ್ಸಿಗೆ ಮಹತ್ವ ನೀಡಿ ಪವಿತ್ರ ಮತದಾನದ ಹಕ್ಕು ನೀಡಲಾಗಿದೆ. ಮತದಾನ ದಿನದಂದು ರಜೆ ಸಹ ನೀಡಲಾಗುತ್ತದೆ. ಹೀಗಿದ್ದಾಗಿಯೂ ಮತ ಚಲಾವಣೆಗೆ ಹಿಂದೇಟು ಏಕೆ ಎಂದು ಅರ್ಥವಾಗುತ್ತಿಲ್ಲ ಎಂದ ಅವರು, ಇಂದಿನ ಯುವ ಸಮೂಹ ಇದನ್ನರಿತು ಪ್ರಜಾ ಸ್ನೇಹಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಶ್ಯಕತೆ ಇದೆ ಎಂದು ಎಸ್.ನಾಗಶ್ರೀ ಅವರು ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟಿರುವ ದೊಡ್ಡ ಕೊಡುಗೆ ಎಂದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ. ಇದಕ್ಕೆ ನಾವೆಲ್ಲ ಅಭಾರಿಯಾಗಿದ್ದೇವೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯ ಭಾಗಿಯಾಗಬೇಕು ಎಂದು ಯುವ ಜನತೆಗೆ ಕರೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ಯ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ, ಪ್ರತಿ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮತದಾನ ಜನ್ಮ ಸಿದ್ದ ಹಕ್ಕು, ಕಡ್ಡಾಯವಾಗಿ ಮತ ಚಲಾಯಿಸಬೇಕು. ವಾಸ ಸ್ಥಳ ಬದಲಾಯಿಸಿದಲ್ಲಿ ಬದಲಾವಣೆಯಾದ ಸ್ಥಳದಲ್ಲಿ ನಮೂನೆ-8 ಅರ್ಜಿ ಭರ್ತಿ ಮಾಡಿ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬಹುದು ಎಂದರು.

ಜಿಲ್ಲಾ ಪಂಚಾಯ್ತಿ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಅವರ ನೆರದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಮತದಾರರ ಪ್ರತಿಜ್ಞೆ ಬೋಧಿಸಿದರು. ಇದೇ ಸಂದರ್ಭದಲ್ಲಿ ನೂತನ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಕಲಬುರಗಿ ತಹಸೀಲ್ದಾರ್‌ ನಾಗಮ್ಮ ಕಟ್ಟಿಮನಿ, ಚುನಾವಣಾ ತಹಸೀಲ್ದಾರ ಪಂಪಯ್ಯ ಸೇರಿದಂತೆ ಅನೇಕರು ಇದ್ದರು.

Share this article