- ತಾಲೂಕು ಪಂಚಾಯಿತಿ ಆವರಣದಲ್ಲಿ ಶಾಂತಿ ಸಭೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲು ಎಲ್ಲರೂ ಸಹಕಾರ ನೀಡುವಂತೆ ತಹಸೀಲ್ದಾರ್ ಡಾ.ನೂರಲ್ ಹುದಾ ಕರೆ ಮನವಿ ಮಾಡಿದರು.
ಬುಧವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಗಣೇಶೋತ್ಸವ- ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಬದಿಯಲ್ಲಿ ಗಣಪತಿ ಪ್ರತಿಷ್ಠಾಪಿಸಬೇಡಿ. ಇದರಿಂದ ವಾಹನಗಳಿಗೆ ತೊಂದರೆಯಾಗಲಿದೆ ಎಂದರು.ಸಿಪಿಐ ಗುರುದತ್ ಕಾಮತ್ ಮಾತನಾಡಿ, ಎಲ್ಲೆಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆಯೋ ಅದರಡಿ ಗಣಪತಿ ಪ್ರತಿಷ್ಠಾಪನೆ ಬೇಡ. ಕಳೆದ ವರ್ಷದಂತೆ ಈ ಬಾರಿ ಗಣೇಶೋತ್ಸವ ಶಾಂತಿಯಿಂದ ಆಚರಿಸಿ, ಬದಲಾವಣೆ ಇದ್ದಲ್ಲಿ ಗಣಪತಿ ಸಮಿತಿಯವರು ಕೂಡಲೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗಣಪತಿ ಪ್ರತಿಷ್ಠಾಪಿಸಿದ ಜಾಗದಲ್ಲಿ ದಿನದ 24 ತಾಸುಗಳಲ್ಲೂ ವಾಚ್‌ಮ್ಯಾನ್, ಸಂಘದ ಪದಾಧಿಕಾರಿ ಕಡ್ಡಾಯವಾಗಿರಬೇಕು. ವಿಸರ್ಜನಾ ಮೆರವಣಿಗೆಯಲ್ಲಿ ಯಾವುದೇ ರೀತಿಯಲ್ಲೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ, ಪ್ರಚೋದನಕಾರಿ ಘೋಷಣೆ ಕೂಗಬಾರದು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ, ಮೆರವಣಿಗೆ ಕಳೆದ ಬಾರಿ ನಡೆದ ಮಾರ್ಗದಲ್ಲೇ ಸಾಗಬೇಕು ಎಂದರು.ವಿಠಲ ಗ್ರಾಮದ ಗಣಪತಿ ಸಂಘದ ಸದಸ್ಯ ಮಂಜುನಾಥ್ ಮಾಡಿ, ತಾಲೂಕಿನಲ್ಲಿ ವಿಪರೀತ ಆನೆ ಕಾಟ ಹಿನ್ನೆಲೆದ ವಿಠಲ ಗ್ರಾಮದ ಗಣೇಶನ ವಿಸರ್ಜನೆ ವೇಳೆಗೆ ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ರಕ್ಷಣೆ ನೀಡಬೇಕೆಂದರು.ತಾಪಂ ಇಒ ಎಚ್.ಡಿ. ನವೀನ್‌ಕುಮಾರ್ ಮಾತನಾಡಿ, ಈಗಾಗಲೇ ತಾಪಂನಲ್ಲಿ ಏಕ ಗವಾಕ್ಷಿ ಕೊಠಡಿ ಸ್ಥಾಪಿಸ ಲಾಗಿದೆ. ಗಣೇಶೋತ್ಸವ ಸಮಿತಿ ಎಲ್ಲಾ ಇಲಾಖೆಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಅಥವಾ ಸಿಬ್ಬಂದಿ ಏಕ ಗವಾಕ್ಷಿ ಕೊಠಡಿಯಲ್ಲಿ ಲಭ್ಯವಿರುತ್ತಾರೆ. ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಬೇಕು. ನಿಷೇಧಿತ ಬಣ್ಣದಿಂದ ತಯಾರಿಸಿದ ಗಣಪತಿಗೆ ಅನುಮತಿ ಇಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ನಿಗದಿತ ಸ್ಥಳದಲ್ಲೇ ಬ್ಯಾನರ್, ಬಂಟಿಂಗ್ ಗಳನ್ನು ಅಳವಡಿಸಬೇಕು ಎಂದರು.ವೇದಿಕೆಯಲ್ಲಿ ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಕ್ರೈಂ ವಿಭಾಗದ ಪಿಎಸ್ಐ ಜ್ಯೋತಿ, ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಇದ್ದರು.ಸಭೆಯಲ್ಲಿ ಗ್ರಾಪಂಗಳ ಪಿಡಿಒ, ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.