ವಿಕಸಿತ ಭಾರತದ ಸಂಕಲ್ಪ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯ

KannadaprabhaNewsNetwork |  
Published : Jun 17, 2026, 03:00 AM IST
ಬೆಳಗಾವಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಗಳು ಆಗುತ್ತಿವೆ. ರಸ್ತೆ, ರೈಲು, ವಿಮಾನಯಾನ, ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಹೊಸ ಎತ್ತರಕ್ಕೆ ಏರುತ್ತಿದ್ದು, ಬೆಳಗಾವಿ ಕೂಡ ಈ ಪರಿವರ್ತನೆಯ ಪ್ರಮುಖ ಭಾಗವಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ್ ವರ್ಮಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆಗಳು ಆಗುತ್ತಿವೆ. ರಸ್ತೆ, ರೈಲು, ವಿಮಾನಯಾನ, ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಹೊಸ ಎತ್ತರಕ್ಕೆ ಏರುತ್ತಿದ್ದು, ಬೆಳಗಾವಿ ಕೂಡ ಈ ಪರಿವರ್ತನೆಯ ಪ್ರಮುಖ ಭಾಗವಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ್ ವರ್ಮಾ ಹೇಳಿದರು.

ನಗರದ ಮಹಾವೀರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಭಾರತವು ವಿಶ್ವದ ಗಮನ ಸೆಳೆಯುವಂತಹ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲವಾಗಿ ದೇಶದ ಮೂಲಸೌಕರ್ಯ ವ್ಯವಸ್ಥೆ ಬಲಿಷ್ಠವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು, ಆಧುನಿಕ ರೈಲು ನಿಲ್ದಾಣಗಳು, ವಂದೇ ಭಾರತ್ ರೈಲುಗಳು, ವಿಮಾನ ನಿಲ್ದಾಣಗಳ ವಿಸ್ತರಣೆ ಮತ್ತು ಡಿಜಿಟಲ್ ಸಂಪರ್ಕ ವ್ಯವಸ್ಥೆಗಳು ದೇಶದ ಅಭಿವೃದ್ಧಿಯ ಹೊಸ ಚಿತ್ರಣವನ್ನು ನೀಡುತ್ತಿವೆ ಎಂದು ತಿಳಿಸಿದರು.ಬೆಳಗಾವಿ ವಿಮಾನ ನಿಲ್ದಾಣದ ವಿಸ್ತರಣೆ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಸುಮಾರು ₹250 ಕೋಟಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಟರ್ಮಿನಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಮಗಾರಿಯ ಶೇ.90 ರಷ್ಟು ಭಾಗ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಹೊಸ ಟರ್ಮಿನಲ್ ಕಾರ್ಯಾರಂಭವಾದ ಬಳಿಕ ವರ್ಷಕ್ಕೆ ಸುಮಾರು 36 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ಬೆಳಗಾವಿ ವಿಮಾನ ನಿಲ್ದಾಣಕ್ಕೆ ದೊರೆಯಲಿದೆ ಎಂದರು.ಈ ಯೋಜನೆಯಿಂದ ಬೆಳಗಾವಿ ಮಾತ್ರವಲ್ಲದೆ ಉತ್ತರ ಕರ್ನಾಟಕದ ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬೆಳವಣಿಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ದೇಶದ ವಿವಿಧ ನಗರಗಳೊಂದಿಗೆ ಉತ್ತಮ ಸಂಪರ್ಕ ದೊರೆಯುವುದರಿಂದ ಹೂಡಿಕೆದಾರರನ್ನು ಆಕರ್ಷಿಸಲು ಸಹ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.ರೈಲ್ವೆ ಕ್ಷೇತ್ರದಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ತಂದಿದೆ. ಬೆಂಗಳೂರಿನಿಂದ ವಿವಿಧ ನಗರಗಳಿಗೆ ಈಗಾಗಲೇ ಎಂಟು ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಇತ್ತೀಚೆಗೆ ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲು ಸೇವೆಯೂ ಆರಂಭವಾಗಿದೆ. ಇದು ಉತ್ತರ ಕರ್ನಾಟಕದ ಜನರ ಬಹುಕಾಲದ ಕನಸಾಗಿದ್ದು, ಪ್ರಯಾಣಿಕರಿಗೆ ವೇಗದ ಮತ್ತು ಸುಧಾರಿತ ರೈಲು ಸೇವೆ ದೊರೆಯುತ್ತಿದೆ ಎಂದು ತಿಳಿಸಿದರು.ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸುದೀರ್ಘ ಆಡಳಿತದ ದಾಖಲೆಯನ್ನು ಮೀರಿ ಮೋದಿ ಅವರು 4,399 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವುದು ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿದೆ ಎಂದರು.ಮೋದಿ ಅವರ ಪ್ರಾಮಾಣಿಕತೆ, ದೂರದೃಷ್ಟಿ ಹಾಗೂ ನಿರಂತರ ಪರಿಶ್ರಮದಿಂದ ಭಾರತವು ಜಾಗತಿಕ ಮಟ್ಟದಲ್ಲಿ ಪ್ರಭಾವಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೂರಾರು ಕೋಟಿ ರುಪಾಯಿ ಅನುದಾನ ನೀಡಿದ್ದು, ಹಲವು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ವಿವರಿಸಿದರು.ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಕಳೆದ ದಶಕದಲ್ಲಿ ದೇಶದ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಹಿಂದೆ ಮೊಬೈಲ್‌ನಲ್ಲಿ ಒಂದು ಸಂದೇಶ ಡೌನ್‌ಲೋಡ್ ಮಾಡಲು ಹಲವು ನಿಮಿಷಗಳು ಬೇಕಾಗುತ್ತಿದ್ದರೆ, ಇಂದು ಕೆಲವೇ ಕ್ಷಣಗಳಲ್ಲಿ ಮಾಹಿತಿ ವಿನಿಮಯ ಸಾಧ್ಯವಾಗುತ್ತಿದೆ. ಇದು ಡಿಜಿಟಲ್ ಇಂಡಿಯಾದ ಯಶಸ್ಸಿನ ಪ್ರತೀಕ ಎಂದರು.ಪ್ರಧಾನಿ ಮೋದಿ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದಾರೆ. ಈ ಗುರಿ ಸಾಧಿಸಲು ಯುವಜನತೆ, ಉದ್ಯಮಿಗಳು, ರೈತರು, ವಿದ್ಯಾರ್ಥಿಗಳು ಹಾಗೂ ಸಮಾಜದ ಎಲ್ಲ ವರ್ಗದ ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಬೆಳಗಾವಿ ಲೋಕಸಭಾ ಕ್ಷೇತ್ರವು 1999ರಿಂದಲೂ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಜನರ ಆಶೀರ್ವಾದದಿಂದ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಮಹಾನಗರ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಗೀತಾ ಸುತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಾಪೌರ ಪ್ರೀತಿ ಕಾಮಕರ್, ಉಪ ಮಹಾಪೌರ ಹಣಮಂತ ಕೊಂಗಾಲಿ, ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಬ್ಯಾಕಸ್ ಶಿಕ್ಷಣದಿಂದ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚಳ: ಸ್ನೇಹಾ ಬಿಲವಡಿ
ಭೀಕರ ಅಪಘಾತ: ದಂಪತಿ ಸೇರಿ ಮೂವರ ಸಾವು