ಧರ್ಮಸ್ಥಳ: ಎಲ್ಲ ಜಾತಿ, ಮತ, ಧರ್ಮಗಳು ಸೇರಿದಂತೆ ಸಮಾಜದ ಪ್ರತಿಯೊಬ್ಬರನ್ನು ಮೇಲೆತ್ತುವುದೇ ನಿಜವಾದ ಅಭಿವೃದ್ಧಿ. ಶ್ರೀಕ್ಷೇತ್ರ ಧರ್ಮಸ್ಥಳ ಕೂಡ ಜಾತ್ಯಾತೀತವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ 2047ರ ವಿಕಸಿತ ಭಾರತ ಗುರಿ ಈಡೇರಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಸಿರಿ ಸಂಸ್ಥಾಪಕಿ ಹಾಗೂ ಧರ್ಮಸ್ಥಳ ಜ್ಞಾನವಿಕಾಸ ಕಾರ್ಯಕ್ರಮಗಳ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ, ದೆಹಲಿಯ ರಾಜ್ಯಸಭೆ ಕಾರ್ಯದರ್ಶಿ ಡಾ.ಕೆ.ಎಸ್.ಸೋಮಶೇಖರ್, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಇದ್ದರು. ಸಿರಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಸ್ವಾಗತಿಸಿದರು. ಉಜಿರೆ ಎಸ್‌ಡಿಎಂ ಕಾಲೇಜು ಪ್ರೊ.ಡಾ.ಶ್ರೀಧರ ಭಟ್ ನಿರೂಪಿಸಿ ವಂದಿಸಿದರು. ಮತಾಂತರ ಒಪ್ಪುವುದಿಲ್ಲ: ಉಪ ರಾಷ್ಟ್ರಪತಿ ರಾಧಾಕೃಷ್ಣನ್: ಒಬ್ಬನೇ ಒಬ್ಬ ಹಿಂದುವಿನಲ್ಲಿ ಮೂಲಭೂತವಾದಿ ಇರುವುದಿಲ್ಲ. ಸರ್ವ ಜನಾಂಗದದವರು ನಮ್ಮ ದೇಶದಲ್ಲಿ ಅನ್ಯೋನ್ಯವಾಗಿದ್ದಾರೆ. ನಾನು ಮೂಲಭೂತವಾದಿಯಲ್ಲ. ಎಲ್ಲ ಧರ್ಮದವರನ್ನು ನಾನು ಗೌರವಿಸುತ್ತೇನೆ. ಅಲ್ಲಾ ಕೂಡ ದೇವರು, ಕ್ರೈಸ್ತ ಕೂಡ ದೇವರು. ಆದರೆ ನಾನು ಮತಾಂತರವನ್ನು ಒಪ್ಪುವುದಿಲ್ಲ. ಮತಾಂತರ ಎನ್ನುವುದು ಧರ್ಮ ಧರ್ಮಗಳ ನಡುವೆ ಘರ್ಷಣೆಗೆ, ವೈರತ್ವಕ್ಕೆ ಕಾರಣವಾಗುತ್ತದೆ. ನಿಜವಾದ ಜಾತ್ಯತೀತತೆ ಎಂದರೆ ಎಲ್ಲ ಧರ್ಮಗಳನ್ನು ಗೌರವಿಸುವುದು. ಅವರವರ ಧರ್ಮದವರ ನಂಬಿಕೆಗೆ ಗೌರವ ನೀಡುವುದು, ಹಾಗೆಂದು ನನ್ನನ್ನು ಮತಾಂತರಗೊಂಡು ಬೇರೆ ದೇವರನ್ನು ಪೂಜಿಸು ಎಂದರೆ ಅದು ಸಾಧ್ಯನಾ ಎಂದು ಉಪ ರಾಷ್ಟ್ರಪತಿಗಳು ಪ್ರಶ್ನಿಸಿದರು.ಮಹಿಳಾ ಸ್ವಾವಲಂಬನೆಗೆ ಸಿರಿ ಸ್ಥಾಪನೆ: ಡಾ. ಹೆಗ್ಗಡೆ ಮೆಲುಕು:ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಆಶಯ ಭಾಷಣದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ಸಮಯದಲ್ಲಿ ನಾನು ಮತ್ತು ನನ್ನ ಶ್ರೀಮತಿ ಅವರು ಈ ಭಾಗದ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದೇವೆ. ಅಲ್ಲಿ ಕಂಡ ಪರಿಸ್ಥಿತಿ ನಮಗೆ ತುಂಬಾ ನೋವು ತಂದಿತು. ಅನೇಕ ಗ್ರಾಮೀಣ ಮಹಿಳೆಯರು ಜೀವನೋಪಾಯಕ್ಕಾಗಿ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ಕುಟುಂಬಗಳಿಗೆ ಸ್ವಲ್ಪ ಕೃಷಿ ಭೂಮಿ ಇದ್ದರೂ, ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಪರಿಸ್ಥಿತಿ ಇರಲಿಲ್ಲ. ಯಾಕೆಂದರೆ ದಿನಗೂಲಿ ಕೆಲಸಕ್ಕೆ ಹೋಗದಿದ್ದರೆ ಆ ದಿನ ಕುಟುಂಬದ ಹೊಟ್ಟೆ ಹೊರೆಯುವುದು ಕಷ್ಟವಾಗಿತ್ತು. ಇದರ ಜೊತೆಗೆ ಅನೇಕ ಪುರುಷರು ಮದ್ಯಪಾನದ ದುಷ್ಟಟಕ್ಕೆ ಒಳಗಾಗಿದ್ದರು. ದೊಡ್ಡ ಕುಟುಂಬ, ಕುಟುಂಬದ ಹೆಚ್ಚಿನ ಜವಾಬ್ದಾರಿ ಮಹಿಳೆಯರ ಮೇಲೇ ಇತ್ತು. ಅವರು ತಮ್ಮ ಆರೋಗ್ಯ, ಕನಸು, ಗೌರವ ಎಲ್ಲವನ್ನೂ ತ್ಯಜಿಸಿ ಮಕ್ಕಳ ಬದುಕಿಗಾಗಿ ಹೋರಾಡುತ್ತಿದ್ದ ದೃಶ್ಯ ಮನಸ್ಸನ್ನು ಕಲಕುವಂತಿತ್ತು. ಆ ಸಂದರ್ಭದಲ್ಲಿ ಕೇವಲ ಸಹಾನುಭೂತಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಶಾಶ್ವತ ಜೀವನೋಪಾಯ ಬೇಕು ಎಂದು ಮನಗಂಡು ನಾವು ದೀರ್ಘಾವಧಿ ಕೃಷಿ ಮತ್ತು ಅಲ್ಪಾವಧಿ ಕೃಷಿ ಎಂಬ ಕಲ್ಪನೆಗಳನ್ನು ಪರಿಚಯಿಸಿದೆವು ಎಂದು ಸಿರಿ ರೂಪುಗೊಂಡ ಬಗೆಯನ್ನು ಮೆಲುಕು ಹಾಕಿದರು.
ದೀರ್ಘಕಾಲದ ಆದಾಯಕ್ಕಾಗಿ ರಬ್ಬರ್ ಮತ್ತು ತೆಂಗಿನ ಗಿಡಗಳನ್ನು ವಿತರಿಸಿದ್ದೇವೆ. ತಕ್ಷಣದ ಆದಾಯಕ್ಕಾಗಿ ಮಲ್ಲಿಗೆ ಬೆಳೆ, ಹೈನುಗಾರಿಕೆ ಮತ್ತು ತರಕಾರಿ ಕೃಷಿಯನ್ನು ಉತ್ತೇಜಿಸಲಾಯಿತು. ಹೀಗೆ ನಿಧಾನವಾಗಿ ಮಹಿಳೆಯರಲ್ಲಿ ಬದಲಾವಣೆ ಕಾಣತೊಡಗಿತು. ಆರ್ಥಿಕ ಸ್ಥಿತಿ ಸುಧಾರಿಸಿತು. ಆತ್ಮವಿಶ್ವಾಸ ಹೆಚ್ಚಾಯಿತು. ಕತ್ತಲೆಯಲ್ಲಿದ್ದ ಮನೆಗಳಿಗೆ ಆಸೆಯ ಬೆಳಕು ಬಂದಿತು. ಜತೆಗೆ ಮಹಿಳೆಯರಿಗೆ ಇನ್ನಷ್ಟು ಉದ್ಯೋಗಾವಕಾಶಗಳನ್ನು ದೊರಕಿಸಬೇಕೆಂಬ ಕಾರಣಕ್ಕಾಗಿ ಹೊಲಿಗೆ ಘಟಕಗಳು, ಜ್ಯೂಸ್, ಬ್ಲೀಚಿಂಗ್ ಪೌಡರ್, ಅಗರಬತ್ತಿ, ತಿಂಡಿ, ಉಪ್ಪಿನಕಾಯಿ ಮತ್ತು ಖಾರ ಪದಾರ್ಥ ತಯಾರಿಕಾ ಕೇಂದ್ರಗಳನ್ನು ವಿವಿಧ ಗ್ರಾಮಗಳಲ್ಲಿ ಆರಂಭಿಸಲಾಯಿತು. ಇದಕ್ಕಾಗಿ ಮಹಿಳೆಯರಿಗೆ ಕಚ್ಚಾ ವಸ್ತುಗಳನ್ನು ಒದಗಿಸುವುದು ಮತ್ತು ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು. ಇದರಿಂದ ಮಹಿಳೆಯರು ಸ್ವ-ಉದ್ಯೋಗದ ಮೂಲಕ ಸ್ವಲ್ಪಮಟ್ಟಿನ ಆದಾಯ ಗಳಿಸಲು ಸಾಧ್ಯವಾಯಿತು ಎಂದರು.ಆದರೆ ಘಟಕಗಳು ವಿವಿಧ ಗ್ರಾಮಗಳಲ್ಲಿ ಇದ್ದುದರಿಂದ ಇವುಗಳನ್ನು ಸರಿಯಾಗಿ ನಿರ್ವಹಿಸುವುದು ಕಷ್ಟಕರವಾಗತೊಡಗಿತು. ಗ್ರಾಮೀಣ ಮಹಿಳೆಯರು ಒಂದೇ ಸ್ಥಳದಲ್ಲಿ ಸೇರಿ ಗೌರವದಿಂದ ಕೆಲಸ ಮಾಡುವ, ಪರಸ್ಪರ ಬೆಂಬಲಿಸುವ, ಉತ್ತಮ ಉತ್ಪನ್ನಗಳನ್ನು ತಯಾರಿಸುವ ಒಂದು ಸಾಮಾನ್ಯ ವೇದಿಕೆ ಬೇಕು ಎಂಬ ನಿರ್ಧಾರಕ್ಕೆ ಬಂದೆವು. ಆ ಕನಸೇ ‘ಸಿರಿ’. 2004ರಲ್ಲಿ ‘ಸಿರಿ’ಯನ್ನು ಲಾಭರಹಿತ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಎಂದರು.ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳು ದೊಡ್ಡ ಮಾರುಕಟ್ಟೆ ತಲುಪುವಂತೆ ಮಾರುಕಟ್ಟೆ ಸಂಪರ್ಕಗಳನ್ನು ನಿರ್ಮಿಸಲಾಯಿತು. ಮಹಿಳೆಯರ ನೋವಿಗೆ ಸ್ಪಂದನೆಯಾಗಿ ಆರಂಭವಾದ ಪ್ರಯತ್ನ ಇಂದು ‘ಸಿರಿ’ ಎಂಬ ಮಹಿಳಾ ಆರ್ಥಿಕ ಸಬಲೀಕರಣದ ಚಳವಳಿಯಾಗಿ ಬೆಳೆದಿದೆ. ಈ ರೀತಿ ಹಲವು ಪ್ರಯೋಗಗಳ ಮೂಲಕ ಆರಂಭವಾದ ಸಿರಿ ಈಗ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಪ್ರಯಾಣದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದರು.ಪ್ರಧಾನಮಂತ್ರಿಗಳ ಕನಸಿನ ಆತ್ಮನಿರ್ಭರ ಭಾರತಕ್ಕೆ ಸಿರಿ, ಎಸ್.ಕೆ.ಡಿ.ಆರ್.ಡಿ.ಪಿ. ಮತ್ತು ರುಡ್ ಸೆಟಿ ಸಂಸ್ಥೆಗಳು ಇದೇ ದಾರಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿವೆ ಎಂದರು. ಸಮಾರಂಭದ ವಿಶೇಷತೆ:ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕನ್ನಡದಲ್ಲಿ ‘ಎಲ್ಲರಿಗೂ ನನ್ನ ನಮಸ್ಕಾರಗಳು...’ ಎಂದು ಮಾತು ಆರಂಭಿಸಿದರು.-ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮತ್ತು ವೇದಿಕೆಯ ಗಣ್ಯರಿಗೆ ಸಿರಿ ಉತ್ಪನ್ನಗಳ ಕಿಟ್‌ನ್ನು ನೀಡಲಾಯಿತು.