ಎಲ್ಲರ ಚಿತ್ತ ಲೋಕಾ ಫಲಿತಾಂಶದತ್ತ

KannadaprabhaNewsNetwork | Published : Jun 3, 2024 12:31 AM

ಸಾರಾಂಶ

ಫಲಿತಾಂಶಕ್ಕಾಗಿ ಪ್ರಮುಖ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಕಾತರ

ಶಿವಕುಮಾರ ಕುಷ್ಟಗಿ ಗದಗ

ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದ್ದರೆ, ಕಾಂಗ್ರೆಸಿಗರು ಜೂ. 4ರಂದು ಹೊರಬೀಳುವ ಅಧಿಕೃತ ಫಲಿತಾಂಶವೇ ಅಂತಿಮ, ಅಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಫಲಿತಾಂಶದ ದಿನ ಸನ್ನಿಹಿತವಾದಂತೆ ಜಿಲ್ಲೆಯಾದ್ಯಂತ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಮತದಾನ ನಡೆದು ಸುದೀರ್ಘ 28 ದಿನಗಳ ನಂತರ ಜೂ. 4ರಂದು ಪ್ರಕಟವಾಗುವ ಲೋಕಸಭಾ ಚುನಾವಣಾ ಫಲಿತಾಂಶದತ್ತ ಜಿಲ್ಲೆಯ ಜನರ ಚಿತ್ತ ನೆಟ್ಟಿದ್ದು, ಫಲಿತಾಂಶಕ್ಕಾಗಿ ಪ್ರಮುಖ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು ಕಾತರರಾಗಿದ್ದಾರೆ.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರಾನೇರಾ ಸ್ಪರ್ಧೆ ನಡೆದಿದ್ದು, ಹಾವೇರಿಯ ಲೋಕಾ ಗದ್ದುಗೆ ಯಾರಿಗೆ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ನಡೆದಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿ ಗೆಲುತ್ತಾರೆ ಎಂಬ ವಿಶ್ವಾಸದೊಂದಿಗೆ ಬೆಟ್ಟಿಂಗ್‌ ಕಟ್ಟಿ, ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರದ ಪೈಕಿ ಶಿರಹಟ್ಟಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಇನ್ನುಳಿದ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಶಾಸಕರ ಬಲಾಬಲ, ಪಂಚ ಗ್ಯಾರಂಟಿ ಯೋಜನೆ ಜಾರಿ, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದು ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವಿಗೆ ಮಹಿಳೆಯರ ಮತಗಳೇ ದೊಡ್ಡ ಬಲ ನೀಡಿದ್ದು, ವಿಶ್ವಾಸ ಹೆಚ್ಚಿಸಿದೆ.

ಮೋದಿಯೇ ಗ್ಯಾರಂಟಿ:

ಇನ್ನು ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯದಲ್ಲಿ ಅನುಭವಿ ನಾಯಕರು, ಕ್ಷೇತ್ರದಲ್ಲಿ ಚಿರಪರಿಚಿತರು. ಅನೇಕ ಚುನಾವಣೆ ಎದುರಿಸಿರುವ ಅವರು ರಾಜ್ಯದ ಸಿಎಂ ಆಗಿ ಜನಪರ ಆಡಳಿತ ನಡೆಸಿದ ಅನುಭವಿ ನಾಯಕರು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿತವರು. ದೇಶದ ಸುರಕ್ಷತೆಗೆ ಮತ ನೀಡಬೇಕು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು, ಅಭ್ಯರ್ಥಿ ನಾನಲ್ಲ, ಮೋದಿ ಎಂದೇ ತಿಳಿಯಿರಿ ಎಂದು ಮೋದಿ ಹೆಸರಲ್ಲೇ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಗೆ ಸೆಡ್ಡು ಹೊಡೆಯುವಂತೆ ಮೋದಿಯೇ ಗ್ಯಾರಂಟಿ ಎಂದು ಹೇಳಿದ್ದಾರೆ. ಮುಸ್ಲಿಂ ಓಲೈಕೆ ಮಾಡುವವರಿಗೆ ಮತ ನೀಡದೆ ದೇಶದ ಸುಭದ್ರತೆಗೆ ಮತ ನೀಡಿ ಎಂದು ಒತ್ತಿ ಹೇಳಿದ್ದಾರೆ. ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದು, ಈ ಬಾರಿಯೇ ಗೆಲವು ಬಿಜೆಪಿಯದ್ದೇ ಎನ್ನುವುದು ಆ ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತ ಸಿದ್ಧತೆ: ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಜೂ. 4ರಂದು ಬೆಳಗ್ಗೆ 8ರಿಂದ ಹಾವೇರಿ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಕೈಗೊಂಡಿದೆ.

ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 9,02,119 ಪುರುಷ, 8,90,572 ಮಹಿಳಾ ಹಾಗೂ ಇತರ 83 ಮತದಾರರು ಸೇರಿ 17,92,774 ಮತದಾರರ ಪೈಕಿ 7,13,613 ಪುರುಷ ಹಾಗೂ 6,77,577 ಹಾಗೂ ಇತರ 24 ಮತದಾರರು ಸೇರಿ 13,91,214 ಮತದಾರರು ಮತದಾನ ಮಾಡಿದ್ದು, ಶೇ. 77.60ರಷ್ಟು ಮತದಾನವಾಗಿದೆ.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 1,66,031 ಮತ, ಗದಗ ವಿಧಾನಸಭಾ ಕ್ಷೇತ್ರದಲ್ಲಿ 1,70,591, ರೋಣ ವಿಧಾನಸಭಾ ಕ್ಷೇತ್ರದಲ್ಲಿ 1,74,948, ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 1,77,799, ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ 1,84,256, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 1,55,519, ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 1,55,519 ಮತ ಚಲಾವಣೆಗೊಂಡಿದ್ದು ಹಾಗೂ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 1,87,724 ಮತಗಳು ಚಲಾವಣೆಗೊಂಡಿವೆ.

ಮತ ಎಣಿಕೆ ಸುತ್ತು: ಶಿರಹಟ್ಟಿ-18, ಗದಗ-16, ರೋಣ-20, ಹಾನಗಲ್-18, ಹಾವೇರಿ-19, ಬ್ಯಾಡಗಿ-18, ಹಿರೇಕೆರೂರು-17 ಹಾಗೂ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ 5 ಮತಗಟ್ಟೆಗಳ ವಿವಿ ಪ್ಯಾಟ್‌ಗಳ ಮತ ಎಣಿಕೆ ನಡೆಸಲಾಗುವುದು ಎಂದು ಹಾವೇರಿ ಜಿಲ್ಲಾಡಳಿತ ತಿಳಿಸಿದೆ. ಮತ ಎಣಿಕೆ ಕೇಂದ್ರದ ಬಂದೋಬಸ್ತ್‌ಗಾಗಿ 4 ಜನ ಡಿವೈಎಸ್ಪಿ 11 ಇನ್‌ಸ್ಪೆಕ್ಟರ್‌, 26 ಸಬ್ ಇನ್‌ಸ್ಪೆಕ್ಟರ್‌, 2 ಕೆ.ಎಸ್.ಆರ್.ಪಿ. ತುಕಡಿ ಹಾಗೂ 5 ಡಿ.ಎ.ಆರ್. ತುಕಡಿ ಹಾಗೂ ಹೋಮ್‌ಗಾರ್ಡ್ ಮತ್ತು ಸಾಕಷ್ಟು ಪೊಲೀಸ್ ಪೇದೆ ನಿಯೋಜಿಸಿದೆ.

Share this article