ಬಸವಣ್ಣನವರ ತತ್ವ ಎಲ್ಲರೂ ಅಳವಡಿಸಿಕೊಳ್ಳಿ: ಪ್ರಭು ಶ್ರೀಗಳು

KannadaprabhaNewsNetwork |  
Published : May 02, 2025, 12:09 AM IST
ತೇರದಾಳದ ಶ್ರೀಸಿದ್ಧೇಶ್ವರ ದೇವಸ್ಥಾನದ ಬಳಿ ಶ್ರೀಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ ಶ್ರೀಗಳು. | Kannada Prabha

ಸಾರಾಂಶ

ತೇರದಾಳ ಪಟ್ಟಣದ ಬಸವ ಸಮೀತಿ ಆಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಸಂಜೆ ಜೋಡೆತ್ತುಗಳೊಂದಿಗೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ತೇರದಾಳ ಪಟ್ಟಣದ ಬಸವ ಸಮೀತಿ ಆಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಸಂಜೆ ಜೋಡೆತ್ತುಗಳೊಂದಿಗೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.

ಸಿದ್ಧೇಶ್ವರ ದೇವಸ್ಥಾನ ಮುಂದೆ ಚಿಮ್ಮಡದ ಪ್ರಭು ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ಅಲ್ಲಮಪ್ರಭುವಿನ ಸುಕ್ಷೇತ್ರವಾದ ತೇರದಾಳದಲ್ಲಿ ಬಸವ ಸಮಿತಿಯವರು ಎತ್ತುಗಳ ಮೆರವಣಿಗೆ ಮಾಡುತ್ತಿರುವುದು ಅನುಕರಣೀಯ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಎತ್ತು ಸಾಕುವ ಪದ್ಧತಿ ಕಡಿಮೆಯಾಗಬಾರದು. ಅನ್ನ ನೀಡುವ ರೈತ ದೇಶದ ಬೆನ್ನೆಲುಬಾದರೆ, ಕೃಷಿಯಲ್ಲಿ ಆತನೊಡನೆ ಶ್ರಮಿಸುವ ಎತ್ತುಗಳು ರೈತನ ಬೆನ್ನೆಲುಬು ಎನ್ನುವುದನ್ನು ಮರೆಯಬಾರದು. ಯಂತ್ರಗಳ ಬಳಕೆಯೊಂದಿಗೆ ಎತ್ತುಗಳನ್ನು ಸಹ ಭೂಮಿಯ ಕೆಲಸಕ್ಕೆ ಬಳಸಬೇಕು. ಬಸವಣ್ಣನ ತತ್ವಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಪುನೀತರಾಗಬೇಕೆಂದರು.

ಭವ್ಯ ಮೆರವಣಿಗೆಮೆರವಣಿಗೆಯಲ್ಲಿ ೫೦ ಜೋಡಿ ಅಲಂಕಾರಗೊಂಡ ಜೋಡೆತ್ತುಗಳು ಪಾಲ್ಗೊಂಡಿದ್ದವು. ಅಲ್ಲಲ್ಲಿ ಭಕ್ತರು ನೀರು ಹಾಕಿ, ನೈವೇದ್ಯ ಅರ್ಪಿಸಿದರು. ಮೆರವಣಿಗೆ ಪಟ್ಟಣದ ಜವಳಿ ಬಜಾರ, ಪೇಟಭಾಗ, ಸರಕಾರಿ ಪ್ರಾಥಮಿಕ ಶಾಲೆ, ಚಾವಡಿ ವೃತ್ತ, ನಾಡ ಕಾರ್ಯಾಲಯ, ಐತಿಹಾಸಿಕ ದೊಡ್ಡ ಬಸದಿ ಮುಖಾಂತರ ಸಾಗಿಬಂದು ಬಸ್ ನಿಲ್ದಾಣ ಬಳಿಯ ಬಸವೇಶ್ವರ ವೃತ್ತಕ್ಕೆ ಆಗಮಿಸಿತು. ಅಲ್ಲಿ ಬಸವ ಮೂರ್ತಿಗೆ ಗಣ್ಯರು ಪುಷ್ಪಾರ್ಚನೆ, ಆರತಿ ಮಾಡಿ ಕಲ್ಲಟ್ಟಿ ಗಲ್ಲಿ ಮೂಲಕ ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವಸ್ಥಾನದವರೆಗೆ ಸಾಗಿತು. ಕರಡಿ ಮಜಲು ಸೇರಿದಂತೆ ಮಂಗಲವಾದ್ಯಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದ್ದವು.

ಬಸವ ಸಮೀತಿಯ ಪದಾಧಿಕಾರಿಗಳು, ಮುಖಂಡರಾದ ಮಹೇಶ ಯಾದವಾಡ, ಈಶ್ವರ ಕಿತ್ತೂರ, ರಾಮಣ್ಣ ಹಿಡಕಲ್, ಅಪ್ಪು ಮಂಗಸೂಳಿ, ಮಹಾಂತೇಶ ಪಂಚಾಕ್ಷರಿ, ಮಹೇಶ ಹಂಜಿ, ಶಂಕರ ಹೊಸಮನಿ, ಕೇದಾರಿ ಪಾಟೀಲ, ಕಾಶೀನಾಥ ಜಮಖಂಡಿಹಿರೇಮಠ, ಬಿ.ಕೆ. ಪಟ್ಟಣಶೆಟ್ಟಿ, ಸುರೇಶ ಮುಚ್ಚಂಡಿ, ಗಿರೀಶ ಬಿಜ್ಜರಗಿ, ರಮೇಶ ಪಟ್ಟಣಶೆಟ್ಟಿ, ಸಿದ್ದು ಅಮ್ಮಣಗಿ, ಮಲ್ಲಪ್ಪ ಗುಡ್ಡಿ, ಶ್ರೀಶೈಲ ತೆಳಗಿನಮನಿ, ಸಂತೋಷ ಜಮಖಮಡಿ, ಮಹಾಂತೇಶ ನಾಶಿ, ಈಶ್ವರ ಯಲ್ಲಟ್ಟಿ, ಮುರಗೇಶ ಬಾಳಿಕಾಯಿ, ಸದಾಶಿವ ಹೊಸಮನಿ, ಬಾಬು ಹಂಜಿ, ಪ್ರವೀಣ ಕಿತ್ತೂರ, ಮಗೆಪ್ಪ ಕಬ್ಬೂರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

PREV