ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಸಂಸದ ಭೂಮಿಪೂಜೆ

KannadaprabhaNewsNetwork |  
Published : Feb 27, 2026, 02:45 AM IST
 | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 275 ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆ ವರೆಗೆ 21 ಕಡೆಗಳಲ್ಲಿ ಸುಮಾರು 94 ಕೋಟಿ ರು. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಹೆದ್ದಾರಿ 275 ರ ಇಬ್ಬನಿ ರೆಸಾರ್ಟ್ ಬಳಿಯಿಂದ ಸಂಪಾಜೆ ವರೆಗೆ 21 ಕಡೆಗಳಲ್ಲಿ ಸುಮಾರು 94 ಕೋಟಿ ರು. ವೆಚ್ಚದ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಮಡಿಕೇರಿ ತಾಲೂಕಿನ ಮದೆನಾಡು ಬಳಿಯ ಕರ್ತೋಜಿ ಬಳಿ ರಕ್ಷಣಾ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದರು ಸ್ಥಳೀಯರ ಬೇಡಿಕೆಯಂತೆ 21 ಕಡೆಗಳಲ್ಲಿ ರಕ್ಷಣಾ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ರಕ್ಷಣಾ ತಡೆಗೋಡೆ ಕಾಮಗಾರಿಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ನಿತಿನ್ ಗಡ್ಕರಿ ಅವರ ಪ್ರಯತ್ನದಿಂದ ರಾಷ್ಟ್ರದಲ್ಲಿ ಹೆದ್ದಾರಿಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಸಂಸದರು ಹೇಳಿದರು.

ರಾಷ್ಟ್ರದ ರಾಜದಾನಿ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತಿತರ ಕಡೆಗಳಲ್ಲಿ ಸಂಪರ್ಕ ರಸ್ತೆಯನ್ನಾಗಿ ಸರ್ಕಾರ ಕೈಗೊಂಡಿದೆ. ಹಾಗೆಯೇ ರೈಲ್ವೆ ಯೋಜನೆಗಳನ್ನು ವಿದ್ಯುದ್ದೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಹಿಂದೆ ಕಡಿಮೆ ವಿಮಾನ ನಿಲ್ದಾಣಗಳು ಇದ್ದವು, ಈಗ 150 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಹೀಗೆ ಜಾಗತಿಕವಾಗಿ ರಾಷ್ಟ್ರ ಅಭಿವೃದ್ಧಿಯಲ್ಲಿ ಮೂರನೇ ಸ್ಥಾನ ಹೊಂದಿದೆ ಎಂದರು.

ಕೇಂದ್ರ ಸರ್ಕಾರದಿಂದ ಹಲವು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಜನರಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ, ಸ್ವ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪರಿಸರ ಶುಚಿತ್ವಕ್ಕೆ ಒತ್ತು ನೀಡುವ ಮೂಲಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಲೋಕಸಭಾ ಸದಸ್ಯರು ವಿವರಿಸಿದರು.

ಸರ್ಕಾರದಿಂದ ಕೊಡಗು ಜಿಲ್ಲೆಗೆ ಪರಿಸರ ಸಂರಕ್ಷಣೆ ಮತ್ತು ಪ್ರಾಕೃತಿಕ ಸಂಪತ್ತನ್ನು ಸಂರಕ್ಷಣೆ ಮಾಡುವಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಹೇಳಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಂಸದರು ರಕ್ಷಣಾ ತಡೆಗೋಡೆ ನಿರ್ಮಾಣ ಸಂಬಂಧ ತಜ್ಞರು, ಇಲ್ಲಿನ ಸ್ಥಳೀಯ ಮಣ್ಣಿನ ಪರಿಸ್ಥಿತಿಯನ್ನು ಅವಲೋಕಿಸಿ ಯೋಜನೆ ರೂಪಿಸಿದ್ದು, ಆ ನಿಟ್ಟಿನಲ್ಲಿ ಕಾಮಗಾರಿ ನಡೆಯಲಿದೆ ಎಂದು ಪ್ರತಿಕ್ರಿಯಿಸಿದರು.

ರಸ್ತೆ ತಿರುವುಗಳ ಅಗಲೀಕರಣ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು ಇದು ಕಷ್ಟಸಾಧ್ಯದ ಕೆಲಸವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಮುಂದಿನ ಕ್ರಮವಹಿಸಲಾಗುವುದು ಎಂದರು.

ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಸಂಸದರು ಕರಿಮೆಣಸಿಗೆ ಸೆಸ್ ಜಾರಿಗೊಳಿಸುವುದನ್ನು ತಡೆದಿದ್ದಾರೆ ಎಂದು ಶ್ಲಾಘಿಸಿದರು. ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಿದೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ರವಿ ಕುಶಾಲಪ್ಪ, ನಗರಸಭಾ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ಪ್ರಮುಖರಾದ ಉಮೇಶ್ ಸುಬ್ರಮಣಿ, ಕಾಂಗೀರ ಸತೀಶ್, ಪಿ.ಎಂ.ರವಿ. ಗೌತಮ್, ಸಜಿಲ್ ಕೃಷ್ಣ, ಪುಷ್ಪ, ಧನಂಜಯ ಅಗೋಳಿಕಜೆ, ಬೆಳ್ಳಿಯನ ಚಂದ್ರಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಚ್.ಗಿರೀಶ್, ಸಹಾಯಕ ಎಂಜಿನಿಯರ್ ಹನುಮಂತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶಿವಾಜಿ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ
ಫೆ. 28ಕ್ಕೆಶೈಕ್ಷಣಿಕ ಸಮ್ಮೇಳನ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ