ಪ್ರತಿಯೊಬ್ಬರು ಶಿಕ್ಷಣ ಹೊಂದುವುದು ಅಗತ್ಯ: ಪೂಜಾ ಸಜೇಶ್

KannadaprabhaNewsNetwork | Published : Oct 27, 2024 2:30 AM

ಸಾರಾಂಶ

ಶಿಕ್ಷಣವನ್ನು ಪ್ರತಿಯೊಬ್ಬರು ಪಡೆಯುವಂತಾಗಬೇಕು ಎಂದು ಸಮಾಜ ಸೇವಕ ಪೂಜಾ ಸಜೇಶ್‌ ಹೇಳಿದರು. ಟ್ರ್ಯಾಕ್‌ ಶೂಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಶಿಕ್ಷಣವನ್ನು ಪ್ರತಿಯೊಬ್ಬರು ಯಾವುದೇ ಅಡೆತಡೆಯಿಲ್ಲದೆ ಪಡೆಯುವಂತಾಗಬೇಕು ಎಂದು ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಪೂಜಾ ಸಜೇಶ್ ಅಭಿಪ್ರಾಯಪಟ್ಟರು.

ಅವರು ವಿರಾಜಪೇಟೆ -ಕಲ್ತೊಡು ಕ್ಲಸ್ಟರ್ ನ ಮುಖ್ಯ ಶಿಕ್ಷಕರ ಸಭೆ ಹಾಗೂ ವಿವಿಧ ಶಾಲೆಗಳ ಮುನ್ನೂರು ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಟ್ರ್ಯಾಕ್ ಶೂಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ರಾಜ್ಯದಲ್ಲಿಯೂ ಇತರ ರಾಜ್ಯಗಳಂತೆ ಶಾಲೆಗಳು ಅಭಿವೃದ್ಧಿ ಹೊಂದಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಎಂಬ ತಾರತಮ್ಯ ನಿವಾರಣೆ ಆಗಬೇಕು. ನಲಿ ಕಲಿ ಯು ಶಾಲಾ ಮಕ್ಕಳಿಗೆ ಉತ್ತಮ ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು ಮಕ್ಕಳು ಅದರ ಪ್ರಯೋಜನವನ್ನು ಪಡೆಯಬೇಕು ಎಂದರು. ಮಹಿಳಾ ಸಬಲೀಕರಣ ಹಾಗೂ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದ ಅವರು ಮಹಿಳೆಯರಿಗೆ ಪ್ರೋತ್ಸಾಹವನ್ನು ನೀಡಬೇಕೆಂದರು.

ವಿರಾಜಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರವಿ ಮಾತನಾಡಿ ಇಂದಿನ ಮುಖ್ಯ ಶಿಕ್ಷಕರ ಸಭೆಯಲ್ಲಿ ಶಾಲಾ ಮಕ್ಕಳಿಗೆ ಟ್ರ್ಯಾಕ್ ಶೂಟ್ ವಿತರಣೆ ಕಾರ್ಯಕ್ರಮ ನಡೆಯುತ್ತಿರುವುದು ಗಮನಾರ್ಹವಾಗಿದೆ ಎಂದರು.

ಸಿ. ಆರ್. ಪಿ. ವೆಂಕಟೇಶ್ ರವರು ಮಾತನಾಡಿ ಶಿಕ್ಷಣದ ಸಾರ್ವತ್ರಿಕತೆ ಆಗುತ್ತಿದ್ದು ನಲಿ ಕಲಿ ಯು ಮಕ್ಕಳಿಗೆ ಕಲಿಯಲು ಒಂದು ಉತ್ತಮ ವೇದಿಕೆಯಾಗಿದೆ. ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿದೆ ಎಂದರು. ಅಕ್ಷರ ದಾಸೋಹ ಅಧಿಕಾರಿ ರಾಜೇಶ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕಪೇಟೆಯ ಸ. ಮಾ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಅಣ್ಣಮ್ಮ ರವರು ಮಾತನಾಡಿ ವಿರಾಜಪೇಟೆ -ಕಲ್ತೊಡು ಕ್ಲಸ್ಟರ್ ನ ಎಲ್ಲಾ ಶಾಲೆಯ ಶಿಕ್ಷಕರು ಇಂದು ಇಲ್ಲಿ ಆಗಮಿಸಿದ್ದು ನಲಿ ಕಲಿ ಯ ಪರಿಣಾಮಕಾರಿ ಕಲಿಕೆಗೆ ಉಪಯುಕ್ತವಾಗಿದೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕರಾದ ಸೀತಾ, ಸುಜಾತ ಹಾಗೂ ಸ. ಕಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ ಇದ್ದರು. ವಿರಾಜಪೇಟೆ -ಕಲ್ತೊಡು ಕ್ಲಸ್ಟರ್ ನ ವಿವಿಧ ಶಾಲೆಗಳ ಮುನ್ನೂರು ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ವಿತರಿಸಲಾಯಿತು. ಶಾಲೆಗಳ ಮುಖ್ಯ ಶಿಕ್ಷಕರು ಟ್ರ್ಯಾಕ್ ಶೂಟ್ ನ್ನು ಪಡೆದುಕೊಂಡರು. ಶಿಕ್ಷಕಿ ಉಷಾ ನಿರೂಪಿಸಿದರು.

Share this article