ಹಾವೇರಿ: ಗುದ್ದಲೀ ಶಿವಯೋಗಿಗಳು ಸಂಚರಿಸದಲ್ಲೆಲ್ಲ ಧರ್ಮದ ಏಳ್ಗೆ, ಸದಾಚಾರ ಬೇರೂರಿದೆ. ಅವರು ವೀರಶೈವ ಧರ್ಮದ ಲಿಂಗಾಂಗ ಸಾಮರಸ್ಯದ ಸತ್ ಸೇವೆಯನ್ನು ಅಳವಡಿಸಿಕೊಂಡು ಬಂದಿದ್ದರು. ವೀರಶೈವ ಲಿಂಗಾಯತ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು ಎಂದು ಹೊಸರಿತ್ತಿ ಗುದ್ದಲೀಸ್ವಾಮಿ ಮಠದ ಗುದ್ದಲೀಶ್ವರ ಸ್ವಾಮೀಜಿ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ತಂದೆ- ತಾಯಿ ಮೊದಲ ದೇವರು. ಅವರು ಇರುವಾಗಲೇ ಪ್ರೀತಿ- ವಿಶ್ವಾಸದಿಂದ ನೋಡಿಕೊಳ್ಳಬೇಕು. ಇಚ್ಚಂಗಿ ಚರಂತಿಮಠದ ದಯಾನಂದ ಸ್ವಾಮಿ ಹೂವಿನಶಿಗ್ಲಿಯಲ್ಲಿದ್ದುಕೊಂಡು ವಿದ್ಯಾವಂತರಾದರೆ, ವೀರಯ್ಯನವರು ಅನೇಕ ಮಕ್ಕಳಿಗೆ ಶಿಕ್ಷಣ ನೀಡಿ ಸಲುಹಿದರು. ಗದಿಗಯ್ಯಜ್ಜನವರು ಜ್ಯೋತಿಷ್ಯ, ವೇದಾಧ್ಯಯನ ಮಾಡುತ್ತ ಸಮಾಜ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಹಾವನೂರು ದಳವಾಯಿಮಠದ ಶಿವಕುಮಾರ ಸ್ವಾಮಿಗಳು, ಹತ್ತಿಮತ್ತೂರಿನ ನಿಜಗುಣ ಸ್ವಾಮಿಗಳು, ಕುಂದಗೋಳ ಕಲ್ಯಾಣಜ್ಜನವರ ಮಠದ ಬಸವಣ್ಣಜನವರು ಸಾನ್ನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ಹೊಸರಿತ್ತಿಯ ಗುದ್ದಲೀ ಸ್ವಾಮಿಗಳ ಹಾಗೂ ಇಚ್ಚಂಗಿ ಚರಂತಿಮಠದ ವೇ. ಗದಿಗಯ್ಯನವರ ತುಲಾಭಾರ ನಡೆಯಿತು. ಚರಂತಿಮಠದ ವೇ. ದಯಾನಂದಸ್ವಾಮಿ ಸ್ವಾಗತಿಸಿ, ವಂದಿಸಿದರು. ಯಲಿವಾಳ ಹಿರೇಮಠದ ವೇ. ಗುರುಪಾದಯ್ಯ ಶಾಸ್ತ್ರಿಗಳು ನಿರೂಪಿಸಿದರು. ವೇ. ಸಿದ್ದಲಿಂಗಯ್ಯ ಅವರಿಂದ ಸಂಗೀತ ಸೇವೆ ಜರುಗಿತು.