ಬಿಜೆಪಿಯ ನಾರಿ ಶಕ್ತಿ ಬಳಗ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ತರೀಕೆರೆಪ್ರತಿಯೊಬ್ಬ ವ್ಯಕ್ತಿಯೂ ಮಾನವೀಯತೆ ಗುಣ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದರು.
ಬಿಜೆಪಿಯ ನಾರಿ ಶಕ್ತಿ ಬಳಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತರೀಕೆರೆ ತಾಲೂಕಿನ ಕೋರನ ಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಟ್ಟದಾವರೆಕೆರೆ ಗ್ರಾಮದ ಶಕುಂತಲಾ ಮತ್ತು ಸಣ್ಣಪ್ಪ ಎಂಬ ಕುಟುಂಬಕ್ಕೆ ಆಹಾರ ಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ನಾರಿ ಶಕ್ತಿ ಬಳಗದಿಂದ ಒಂದು ಬಡ ಕುಟುಂಬಕ್ಕೆ ಆಹಾರ ಧಾನ್ಯಗಳ ಕಿಟ್ ವಿತರಿಸಬೇಕೆಂದು ಅಂದುಕೊಂಡಿದ್ದೆವು ಆಗ ಕೋರನಹಳ್ಳಿ ಗ್ರಾಪಂ ಅಧ್ಯಕ್ಷರಾದ ಜಯಮ್ಮ ಮತ್ತು ಸುಮಿತ್ರಾ ಅವರ ಕಡೆಯಿಂದ ಬೆಟ್ಟದಾವರೆಕೆರೆ ಗ್ರಾಮದಲ್ಲಿ ಶಕುಂತಲಾ ಮತ್ತು ಸಣ್ಣಪ್ಪ ಅವರ ಕುಟುಂಬದಲ್ಲಿ 23 ವರ್ಷದ ಇವರ ಮಗ ಅಪಘಾತದಿಂದ ಕೋಮ ಸ್ಥಿತಿಗೆ ಹೋಗಿರುವುದು ತಿಳಿಯಿತು. ಆದರೆ ನಾವು ಇಲ್ಲಿಗೆ ಬಂದು ನೋಡಿದ ನಂತರ ಈ ಕುಟುಂಬದ ಸ್ಥಿತಿ ಮತ್ತು ಕೋಮಾದ ಲ್ಲಿರುವಂತ ಮಗ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿರುವ ತಂದೆ ತೀರಾ ಬಡತನದಲ್ಲಿರುವ ಮನೆಯವರನ್ನು ನೋಡಿ ಅವರಿಗೆ ನಮ್ಮ ನಾರಿ ಶಕ್ತಿ ಬಳಗದಿಂದ ಆಹಾರ ಧಾನ್ಯಗಳ ಕಿಟ್, ಹಾಗೂ ಸ್ವಲ್ಪ ಹಣವನ್ನುಇವರಿಗೆ ಕೊಟ್ಟಿರುವುದು ಒಂದು ಸಮಾಧಾನದ ವಿಚಾರ ಎಂದು ಹೇಳಿದರು.ಮಾನವೀಯತೆ ದೃಷ್ಟಿಯಿಂದ ಸರ್ಕಾರ ಸಹ ಈ ಕುಟುಂಬದ ಕಡೆ ಗಮನ ಹರಿಸಿ ಇವರಿಗೆ ಮನೆ ಕಟ್ಟಿಕೊಡಬೇಕು. ಈ ಕುಟುಂಬಕ್ಕೆ ಮಗ ಮತ್ತು ತಂದೆಗೆ ಇಬ್ಬರಿಗೂ ಪಿಂಚಣಿ ವ್ಯವಸ್ಥೆ ಮಾಡಿದರೆ ಈ ಕುಟುಂಬ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನಾರಿ ಶಕ್ತಿ ಬಳಗದ ಸದಸ್ಯೆ ವಿಶಾಲಾಕ್ಷಮ್ಮ ಮಾತನಾಡಿ ಈ ಕುಟುಂಬದ ಬಡತನದ ವ್ಯವಸ್ಥೆ ಮತ್ತು ಕೋಮದಲ್ಲಿರುವ ಮಗ ಸ್ಟ್ರೋಕ್ ಆಗಿ ಇಡೀ ದೇಹ ಸ್ವಾಧೀನ ಕಳೆದುಕೊಂಡಿರುವ ತಂದೆ ಕೂಲಿ ಮಾಡಿ ಬದುಕುವ ತಾಯಿ ಈ ಕುಟುಂಬವನ್ನು ನೋಡಿದರೆ ನಿಜಕ್ಕೂ ನನಗೆ ಕಣ್ಣೀರು ಬರುತ್ತದೆ. ಸರ್ಕಾರ ಮತ್ತು ಗ್ರಾಪಂ ಸಹ ಇತ್ತ ಗಮನ ಹರಿಸಿ ಇವರಿಗೊಂದು ಮನೆ ಕೊಡಿಸುವಂತಹ ವ್ಯವಸ್ಥೆ ಆಗಬೇಕು. ತಹಸೀಲ್ದಾರ್ ಸಹ ಈ ಕುಟುಂಬವನ್ನು ಭೇಟಿ ಮಾಡಿ ತಂದೆ ಮತ್ತು ಮಗ ಇಬ್ಬರಿಗೂ ಪಿಂಚಣಿ ಕೊಡುವ ವ್ಯವಸ್ಥೆಯನ್ನು ತಕ್ಷಣವೇ ಮಾಡಿದರೆ ಆ ಕುಟುಂಬ ಬದುಕಲು ಸಾಧ್ಯ ಎಂದು ತಿಳಿಸಿದರು. ದೋರನಾಳು ಗ್ರಾಪಂ ಹಾಗೂ ನಾರಿಶಕ್ತಿ ಬಳಗದ ಸದಸ್ಯೆ ಶಿಲಾವತಿ ಮಾತನಾಡಿ ನಮ್ಮ ನಾರಿ ಶಕ್ತಿ ಬೆಳಗದಿಂದ ಈ ಕುಟುಂಬಕ್ಕೆ ಸಣ್ಣ ಸಹಕಾರ ನೀಡಿದ್ದೇವೆ ಎಂಬ ಸಮಾಧಾನ ಇದೆ. ಮುಂದಿನ ದಿನಗಳಲ್ಲಿ ನಾವು ಏನು ಮಾಡಬಹುದು ಎಂಬುದನ್ನ ನಮ್ಮ ನಾರಿ ಶಕ್ತಿ ಬಳಗದಲ್ಲಿ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು. ಕೋರನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಮ್ಮ ಮಾತನಾಡಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಸ್ಥಿತಿವಂತರು ನಮ್ಮ ಕೋರನಹಳ್ಳಿ ಗ್ರಾಪಂ ಬೆಟ್ಟದಾವರೆಕೆರೆ ಗ್ರಾಮದ ಈ ಕುಟುಂಬಕ್ಕೆ ಕೈಲಾದ ಸಹಕಾರ ನೀಡಬೇಕೆಂದು ಜನರಲ್ಲಿ ಮನವಿ ಮಾಡಿದರು.
ನಾರಿಶಕ್ತಿ ಬಳಗದ ಸದಸ್ಯರಾದ ಸುಧಾ, ಗ್ರಾಮದ ಹೆಣ್ಣು ಮಕ್ಕಳು ಮತ್ತು ಆ ಮನೆಯ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.14ಕೆಟಿಆರ್.ಕೆ.12ಃ ಬಿ.ಜೆ.ಪಿ.ನಾರಿ ಶಕ್ತಿ ಬಳಗ ವತಿಯಿಂದ ನೆಡೆದ ಕಾರ್ಯಕ್ರಮದಲ್ಲಿ ತರೀಕೆರೆ ಸಮೀಪದ ಬೆಟ್ಟದಾವರೆಕೆರೆ ಗ್ರಾಮದ ಶಕುಂತಲಾ ಮತ್ತು ಸಣ್ಣಪ್ಪ ಎಂಬ ಕುಟುಂಬಕ್ಕೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ತಾ.ಪಂ.ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮತ್ತಿತರರು ಇದ್ದರು.