ಸಿದ್ದರಾಮೇಶ್ವರರ ಜೀವನಾದರ್ಶಗಳನ್ನು ಎಲ್ಲರೂ ಪಾಲಿಸಿ: ಶ್ರೀಧರ

KannadaprabhaNewsNetwork |  
Published : Jan 18, 2026, 03:15 AM IST
ಚಿತ್ರ : 14ಎಂಡಿಕೆ6 : ತಹಶೀಲ್ದಾರರಾದ ಶ್ರೀಧರ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯು ನಗರದ ಗಾಂಧಿ ಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯು ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆಯಿತು.

ತಹಸೀಲ್ದಾರರಾದ ಶ್ರೀಧರ ಅವರು ದೀಪ ಬೆಳಗಿಸಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ತಹಸೀಲ್ದಾರರು ಶಿವಯೋಗಿ ಸಿದ್ದರಾಮೇಶ್ವರರ ವೈಚಾರಿಕ ಪೂರ್ಣ ವಿಚಾರಗಳನ್ನು ಇಂದು ನಾವು ಅರಿಯುವ ಅಗತ್ಯವಿದೆ ಎಂದರು.

ಸಿದ್ದರಾಮೇಶ್ವರರ ಜೀವನಾದರ್ಶಗಳನ್ನು ಜನರಿಗೆ ತಲುಪಿಸಬೇಕಿದೆ. ಸಿದ್ದರಾಮೇಶ್ವರರು ಜನಾಂಗವೊಂದಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಆದರ್ಶನೀಯರು ಎಂದು ನುಡಿದರು.

ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರಾದ ಉಷಾರಾಣಿ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ಜಗತ್ತಿಗೆ ಬೇಕಾದ ಒಬ್ಬ ಶ್ರೇಷ್ಠ ಸಂತ. ಯುವ ಜನಾಂಗದವರು ಇವರ ಆದರ್ಶನೀಯ, ಕಾಯಕಪೂರ್ಣ ಜೀವನವನ್ನು ಪಾಲಿಸುವಂತಾಗಬೇಕು ಎಂದರು.

ಸಿದ್ದರಾಮೇಶ್ವರರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ವಚನಗಳ ಮೂಲಕ ಸಮಾಜವನ್ನು ಅಂದೇ ತಿದ್ದುವ ಕಾರ್ಯವನ್ನೂ ಸಹ ಮಾಡಿದ್ದಾರೆ ಎಂದು ನುಡಿದರು.

ಶಿವಯೋಗಿ ಸಿದ್ದರಾಮೇಶ್ವರ 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಗೆ ಭದ್ರ ಬುನಾದಿಯನ್ನು ಹಾಕಿದವರಲ್ಲಿ ಒಬ್ಬರು ಎಂದರು.

ಸಿದ್ದರಾಮೇಶ್ವರರ ಚಿಂತನೆ, ಸಾಮಾಜಿಕ ಚಟುವಟಿಕೆಗಳನ್ನು ಅವರು ಬೆಳೆಸಿದರು. ಖುದ್ದು ಅಲ್ಲಮ ಪ್ರಭುವೇ ಸಿದ್ದರಾಮೇಶ್ವರರ ಬಗ್ಗೆ ಅರಿಯಲು ಅವರನ್ನು ಹುಡುಕಿಕೊಂಡು ಹೋಗಿ ಭೇಟಿಯಾಗಿದ್ದರು. ಅಷ್ಟರ ಮಟ್ಟಿಗಿನ ಪ್ರಭಾವ ಅವರ ವಚನಗಳಿಗಿತ್ತು ಎಂದು ತಿಳಿಸಿದರು.

ಭೋವಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಡಿ.ಸುಜಿತ್ ಅವರು ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.

ಶಿವಯೋಗಿ ಸಿದ್ದರಾಮೇಶ್ವರರು ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿ ಬಡವರ ಕಲ್ಯಾಣಕ್ಕಾಗಿ ದುಡಿದರು. ಬಹಳ ಹಿಂದೆಯೇ ಸ್ತ್ರೀ-ಪುರುಷರು ಸಮಾನರು ಎಂಬ ಸಂದೇಶವನ್ನು ಸಾರಿದರು. ಜೊತೆಗೆ ಸಾಮೂಹಿಕ ವಿವಾಹಗಳ ಮೂಲಕ ಕುಲದ ಭೇದವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು, ಮಣಜೂರು ಮಂಜುನಾಥ್ ಅವರು ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತ ಸಂಧಾನ ಸಭೆ ವಿಫಲ; ನಾಳೆ ಮಹಾಲಿಂಗಪುರ ಬಂದ್
ಟೀಮ್ ಒನ್ ಟಚ್ ಚಾಂಪಿಯನ್