ಪ್ರತಿಯೊಬ್ಬರು ನಾನು ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು: ಪ್ರಸನ್ನನಾಥ ಸ್ವಾಮೀಜಿ

KannadaprabhaNewsNetwork | Published : Feb 28, 2024 2:39 AM

ಸಾರಾಂಶ

ಮನಸ್ಸು ಮತ್ತು ಬುದ್ಧಿಗೆ ಬಹಳಷ್ಟು ವ್ಯತ್ಯಾಸವಿದೆ. ಚಂಚಲದಿಂದ ಕೂಡಿರುವ ಮನಸ್ಸಿನ ಮೇಲಿರುವುದೇ ಬುದ್ಧಿ. ಮನಸ್ಸಿಗೆ ಕಂಡಂತೆ ಯಾರು ನಡೆಯುತ್ತಾರೆಯೋ ಅವರು ಭೌತಿಕ ಸುಖಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡು ಇಲ್ಲದ ಕಷ್ಟಗಳನ್ನು ತನ್ನ ಮೇಲೆ ಹಾಕಿಕೊಳ್ಳುತ್ತಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆತ್ಮದ ಬಗ್ಗೆ ನಾನು ಬಹಳ ತಿಳಿದುಕೊಂಡಿದ್ದೇನೆ ಎಂದುಕೊಂಡರೆ ಆತ್ಮದ ಬಗ್ಗೆ ನಮಗೇನು ಗೊತ್ತಿಲ್ಲ ಎಂದರ್ಥ. ಹಾಗಾಗಿ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಮೊದಲು ನಾನ್ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ತಿಳಿಸಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ೮೮ನೇ ತ್ರಿಮೂರ್ತಿ ಶಿವಜಯಂತಿ ಪ್ರಯುಕ್ತ ಆಯೋಜಿಸಿದ್ದ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮತ್ತು ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮನಸ್ಸು ಮತ್ತು ಬುದ್ಧಿಗೆ ಬಹಳಷ್ಟು ವ್ಯತ್ಯಾಸವಿದೆ. ಚಂಚಲದಿಂದ ಕೂಡಿರುವ ಮನಸ್ಸಿನ ಮೇಲಿರುವುದೇ ಬುದ್ಧಿ. ಮನಸ್ಸಿಗೆ ಕಂಡಂತೆ ಯಾರು ನಡೆಯುತ್ತಾರೆಯೋ ಅವರು ಭೌತಿಕ ಸುಖಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡು ಇಲ್ಲದ ಕಷ್ಟಗಳನ್ನು ತನ್ನ ಮೇಲೆ ಹಾಕಿಕೊಳ್ಳುತ್ತಾರೆ ಎಂದರು.

ಸರಿ ತಪ್ಪುಗಳ ಆತ್ಮಾವಲೋಕನ ಮಾಡಿಕೊಂಡು ಯಾರು ಬುದ್ಧಿಗೆ ಕಸರತ್ತು ಕೊಡುತ್ತಾರೆಯೋ ಅವರು ಸರಿ ತಪ್ಪು ಯಾವುದೆಂದು ಯೋಚಿಸುತ್ತಾರೆ. ಈ ಬುದ್ಧಿಗಿಂತ ಮೇಲಿರುವುದು ಆತ್ಮ. ಆತ್ಮದ ಬಗ್ಗೆ ಚಿಂತನೆ ಮಾಡುವ ವ್ಯವಸ್ಥೆಯನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಶಿವಲೀಲ ಅಕ್ಕ ಮಾತನಾಡಿ, 12 ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡುವುದು ಸುಲಭದ ಕಾರ್ಯವಲ್ಲ. ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರೆ 12 ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕು. ಈ ದರ್ಶನ ಪಡೆದರೆ ಜೀವನದಲ್ಲಿ ಮಾಡಿರುವ ಪಾಪ ದೋಷ ಕರ್ಮಗಳು ನಾಶವಾಗಿ ಪುಣ್ಯ ಉದಯವಾಗುತ್ತದೆ ಎಂದರು.

12 ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಉದ್ದೇಶದಿಂದ ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನಾಮೃತ ಭವನದಲ್ಲಿ ಫೆ.26ರಿಂದ ಮಾ.8ರ ವರೆಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಬ್ರಹ್ಮಕುಮಾರ ದೀಪಕ್, ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ್, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಮತ್ತು ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಮತ್ತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೈಸೂರು ವಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಲಕ್ಷ್ಮಿಜಿ ಮಾತನಾಡಿದರು.

ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನಾಮೃತ ಭವನದ ಮುಖ್ಯಸ್ಥೆ ಬಿ.ಕೆ.ಶೈಲಕ್ಕ, ಸಂಸ್ಥೆ ಸಿ.ಕುಮಾರ್, ವಿಜಯಕುಮಾರ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಚ್.ಟಿ.ಕೃಷ್ಣೇಗೌಡ, ಎಸ್.ಎಂ.ಕೃಷ್ಣಮೂರ್ತಿ, ಲತಕ್ಕ ಸೇರಿದಂತೆ ಜಿಲ್ಲೆಯ ವಿವಿಧ ಸೇವಾ ಕೇಂದ್ರಗಳ ಮುಖ್ಯಸ್ಥರು ಇದ್ದರು.

Share this article