ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಹೊರವಲಯದಲ್ಲಿನ ಮಿನಿವಿಧಾನಸೌಧದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರ ಅಧ್ಯಕ್ಷತೆಯಲ್ಲಿ ಹಾಗೂ ಪರಿಸರವಾದಿ ಡಿ.ಎ.ಚೌಡಪ್ಪರವರ ನೇತೃತ್ವದಲ್ಲಿ ಮಂಗಳವಾರ ಜಲಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಬಯಲುಸೀಮೆಯ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ಎದುರಾಗುವ ಆತಂಕವಿದೆ. ಪರಿಸರ ಪ್ರೇಮಿಗಳು ಮತ್ತು ನೀರಿನ ಮೂಲಗಳನ್ನು ಉಳಿಸುವ ಆಸಕ್ತಿಯುಳ್ಳ ನಾಗರಿಕರೊಂದಿಗೆ ಕೈ ಜೋಡಿಸಿ ನೀರಿನ ಆಸರೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುವುದು. ಭವಿಷ್ಯದಲ್ಲಿ ಗೌರಿಬಿದನೂರು ಕ್ಷೇತ್ರವನ್ನು ಸಂಪತ್ಭರಿತವಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಪರಿಸರವಾದಿ ಚೌಡಪ್ಪರವರ ನೇತೃತ್ವದಲ್ಲಿ ನಡೆಯುತ್ತಿರುವ ಜಲಸಂವಾದ ಕಾರ್ಯಕ್ರಮವು ಈ ಭಾಗಕ್ಕೆ ಅತ್ಯವಶ್ಯಕವಾಗಿದೆ. ಇತ್ತೀಚೆಗೆ ಶಾಸಕರು ಸ್ವ- ಆಸಕ್ತಿಯಿಂದ ಆರಂಭಿಸಿರುವ ಪಿನಾಕಿನಿ ನದಿಯ ಪುನಶ್ಚೇತನ ಕಾರ್ಯವು ಅಭೂತಪೂರ್ವವಾಗಿದೆ. ದಶಕಗಳ ಬಳಿಕ ನದಿಗೆ ಪುನರ್ಜನ್ಮ ನೀಡುವ ಪ್ರಯತ್ನ ನಿಜಕ್ಕೂ ಸ್ವಾಗತಾರ್ಹ. ಇಂತಹ ಸತ್ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.ಪರಿಸರವಾದಿ ಚೌಡಪ್ಪ ಮಾತನಾಡಿ, ಬಯಲುಸೀಮೆ ಪ್ರದೇಶದಲ್ಲಿ ಜಲಮೂಲಗಳನ್ನು ಉಳಿಸದಿದ್ದಲ್ಲಿ ಶೀಘ್ರದಲ್ಲೇ ಮರಭೂಮಿಯಾಗಿ ಪರಿವರ್ತನೆಯಾಗುವುದು. ಸರ್ಕಾರ, ಅಧಿಕಾರಿಗಳು ಮತ್ತು ನಾಗರಿಕರು ಹೆಚ್ಚಿನ ಆಸಕ್ತಿ ವಹಿಸಿ ಪರಿಸರ ಮತ್ತು ಜಲಮೂಲಗಳನ್ನು ಉಳಿಸಿ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ಕುಡಿಯುವ ನೀರು ದೊರೆಯಲಿದೆ. ಸ್ಥಳೀಯ ಶಾಸಕರು ಪಿನಾಕಿನಿ ನದಿ ಪಾತ್ರವನ್ನು ಪುನಶ್ಚೇತನ ಗೊಳಿಸಲು ನಿರ್ಧರಿಸಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಇಂತಹ ಸತ್ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಜಲಸಂವಾದ ಕಾರ್ಯಕ್ರಮದಲ್ಲಿ ತಾಪಂ ಇಒ ಜಿ.ಕೆ.ಹೊನ್ನಯ್ಯ, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಮುಖಂಡರಾದ ಜಿ.ಎನ್.ನಾಗರಾಜ್, ಅಬ್ದುಲ್ಲಾ, ಲಕ್ಷ್ಮೀ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ನಾಗರಿಕರು ಭಾಗವಹಿಸಿದ್ದರು.ನಮ್ಮ ನದಿ, ನಮ್ಮ ಹೆಮ್ಮೆ;
ಕ್ಷೇತ್ರದ ಜನತೆಯ ಜೀವನಾಡಿಯಾಗಿರುವ ಉತ್ತರ ಪಿನಾಕಿನಿ ನದಿಯು ದಶಕಗಳಿಂದ ಮರಳು ದಂಧೆಗೆ ಸಿಲುಕಿ, ತನ್ನ ನೈಜ ಸ್ವರೂಪವನ್ನೇ ಕಳೆದುಕೊಂಡಿದೆ. ಅದನ್ನು ಪುನಶ್ಚೇತನಗೊಳಿಸಿ ಮತ್ತೆ ಮರುಜೀವ ನೀಡುವ ಉದ್ದೇಶದಿಂದ ಸ್ಥಳೀಯ ಎಸಿಸಿ ಸಂಸ್ಥೆಯ ಸಹಯೋಗದೊಂದಿಗೆ ನದಿಯನ್ನು ಸ್ವಚ್ಛಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಮತ್ತು ನನ್ನ ವೈಯಕ್ತಿಕ ಅನುದಾನದಿಂದ ಪಿನಾಕಿನಿ ನದಿಯನ್ನು ಉಳಿಸಿ ಅದರ ಸೌಂದರ್ಯವನ್ನು ಹೆಚ್ಚಿಸುವ ಮೂಲಕ ಈ ಭಾಗದ ಜನತೆಯ ಋಣ ತೀರಿಸುತ್ತೇನೆ. ಈಗಾಗಲೇ ಸಣ್ಣ ನೀರಾವರಿ ಸಚಿವ ಬೋಸರಾಜ್ ರವರಿಗೆ ಮನವಿ ಮಾಡಲಾಗಿದ್ದು, ಸುಮಾರು 4 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಭವಿಷ್ಯದಲ್ಲಿ ಈ ಭಾಗದ ನೀರಾವರಿ ಮೂಲಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.