ಹಾನಗಲ್ಲ: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಕೈಜೋಡಿಸುವಂತೆ ನೀಡಿದ ಕರೆಗೆ ತಾಲೂಕಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮಾತ್ರವಲ್ಲದೇ ಹಳೆ ಬೇರು, ಹೊಸ ಚಿಗುರು ಹೆಸರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವಾಗಿ ರೂಪುಗೊಳ್ಳಲು ಪ್ರೇರಣೆಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಬೇರು, ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಜಾಗತಿಕ ಸ್ಪರ್ಧೆ, ಸವಾಲುಗಳನ್ನು ಎದುರಿಸುವಂತೆ ರೂಪಿಸುವ ಅಗತ್ಯವಿದೆ. ಈ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರಿಸಿ ಕೈಕಟ್ಟಿ ಕುಳಿತುಕೊಂಡರೆ ಪ್ರಯೋಜನವಾಗದು. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಕಲಿತ ಪ್ರತಿಯೊಬ್ಬರೂ ಕೈಜೋಡಿಸಿದರೆ ಈ ಕಾರ್ಯ ಸುಲಭ ಸಾಧ್ಯವಾಗಲಿದೆ ಎಂದರು.
ಹಾನಗಲ್ಲ ತಾಲೂಕಿನಲ್ಲಿ ನಡೆಸುತ್ತಿರುವ ಅಭಿಯಾನ ಫಲ ನೀಡಿದೆ. 93 ಶಾಲೆಗಳಿಗೆ 1.55 ಕೋಟಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ವೆಚ್ಚವ ಅರ್ಧ ಭಾಗ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ನೀಡಿದರೆ, ಉಳಿದರ್ಧ ವೈಯಕ್ತಿಕವಾಗಿ ಭರಿಸಿದ್ದೇನೆ. ಇದರ ಪ್ರೇರಣೆಯಿಂದಲೇ ಶಿಕ್ಷಣ ಇಲಾಖೆ ಹಳೆ ಬೇರು, ಹೊಸ ಚಿಗುರು ಅಭಿಯಾನ ರೂಪಿಸಿ, ಸಮುದಾಯದ ಸಹಕಾರದಿಂದ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದೆ ಎಂದರು.ಪ್ರಾಚಾರ್ಯ ವಿ.ಎಂ. ಕುಮ್ಮೂರ ಮಾತನಾಡಿ, ಕಾಲೇಜಿನಲ್ಲಿ ಇದುವರೆಗೆ ಅಭ್ಯಾಸ ಕೈಗೊಂಡ ಹಳೆಯ ವಿದ್ಯಾರ್ಥಿಗಳನ್ನೆಲ್ಲ ಸಂಪರ್ಕಿಸುತ್ತಿದ್ದೇವೆ. ಶೀಘ್ರದಲ್ಲಿ ಹಳೆ ವಿದ್ಯಾರ್ಥಿಗಳ ಒಕ್ಕೂಟ ರಚಿಸಿ ಸಹಾಯ ಪಡೆದುಕೊಳ್ಳುವ ಆಲೋಚನೆ ಮಾಡಿದ್ದೇವೆ. ಇಡೀ ಜಿಲ್ಲೆಯಲ್ಲಿಯೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಉದ್ಯಮಿ ಸದಾಶಿವ ಬೆಲ್ಲದ, ತಾಪಂ ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ನಿವೃತ್ತ ಡಿಎಚ್‌ಒ ಡಾ. ಈಶ್ವರ ಮಾಳೋದೆ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೆಹಬೂಬಅಲಿ ಬ್ಯಾಡಗಿ, ಮುಖಂಡರಾದ ಯಾಸೀರ್‌ಅರಾಫತ್ ಮಕಾನದಾರ, ಅಲ್ತಾಪ್ ಶಿರಹಟ್ಟಿ, ಉಪನ್ಯಾಸಕಿ ಡಾ. ಯಮುನಾ ಕೋಣೇಸರ್ ಉಪಸ್ಥಿತರಿದ್ದರು.ನಿಯಮಿತವಾಗಿ ನೇತ್ರದ ತಪಾಸಣೆ ಮಾಡಿಸಿಕೊಳ್ಳಿಸವಣೂರು: ಕಣ್ಣಿನ ಆರೋಗ್ಯ ದೃಷ್ಟಿಯಿಂದ ನಿಯಮಿತವಾಗಿ ನೇತ್ರದ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಕಳಸೂರ ಗ್ರಾಮದ ಹಿರಿಯರಾದ ಶಿವಾಜಪ್ಪ ಪುಟ್ಟಣ್ಣನವರ ತಿಳಿಸಿದರು.
ತಾಲೂಕಿನ ಕಳಸೂರ ಗ್ರಾಮದ ಭೋಗೇಶ್ವರ ದೇವಸ್ಥಾನದಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಅಮ್ಮಾ ಸಂಸ್ಥೆ ಹಿರೇಮುಗದೂರ, ಕಳಸೂರ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.ಮನುಷ್ಯನಿಗೆ ಎಲ್ಲ ಅಂಗಕ್ಕಿಂತ ಕಣ್ಣು ಮಹತ್ವ ಪಡೆದಿದೆ. ಗ್ರಾಮೀಣ ಭಾಗದ ಬಡವರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಉಚಿತ ನೇತ್ರ ತಪಾಸಣಾ ಶಿಬಿರ ಮಾಡಲಾಗುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಮಂಟಗಣಿ ಮಾತನಾಡಿ, ಆರೋಗ್ಯ ಚೆನ್ನಾಗಿದ್ದರೆ ಅದುವೇ ನಮಗೆಲ್ಲ ಸಂಪತ್ತು. ಸಾರ್ವಜನಿಕರು ಇಂತಹ ಶಿಬಿರದ ಸೌಲಭ್ಯವನ್ನು ಉಪಯೋಗಪಡಿಸಿಕೊಳ್ಳುವುದು ಅಗತ್ಯವಿದೆ ಎಂದರು.ಶಂಕರ ವಿಷನ್ ಸೆಂಟರ್ ವೈದ್ಯ ಡಾ. ವಿ. ಮಾಂಡ್ರೆ ಮಾತನಾಡಿ, ಪ್ರಸ್ತುತ ಕಣ್ಣಿನ ಪೊರೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದರು.ಊರಿನ ಹಿರಿಯರಾದ ಹನುಮಂತಗೌಡ ಪಾಟೀಲ ಹಾಗೂ ಅಮ್ಮಾ ಸಂಸ್ಥೆ ಸಂಸ್ಥಾಪಕ ನಿಂಗಪ್ಪ ಎಂ. ಆರೇರ ಮಾತನಾಡಿದರು. ಈ ಸಂದರ್ಭದಲ್ಲಿ ಕಳಸೂರ ಗ್ರಾಪಂ ಸದಸ್ಯರಾದ ಪುಟ್ಟಪ್ಪ ಮರಗಿ, ಗ್ರಾಪಂ ಕಾರ್ಯವೃಂದದವರಾದ ರಮೇಶ ಕ್ಯಾಲಕೊಂಡ, ಆಸ್ಪತ್ರೆಯ ಸೃಜಯ ಕೆ.ಎಂ., ಪ್ರಕಾಶ ಎಸ್. ಸೇರಿದಂತೆ ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.