ಶಿವಮೊಗ್ಗ: ಹಸಿರು ಜೀವನಕ್ಕೆ ಅತಿ ಅವಶ್ಯಕ. ಪರಿಸರ ಇದ್ದರೆ ಮನುಕುಲದ ಉಳಿವು. ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲು ಹಸಿರು ನೆರವಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಕನಿಷ್ಠ ಏಳು ಗಿಡಗಳನ್ನಾದರೂ ನೆಟ್ಟು ಬೆಳೆಸಿದರೆ, ಅದಕ್ಕಿಂತ ಉತ್ತಮ ಕಾರ್ಯ ಬೇರೊಂದಿಲ್ಲ ಎಂದು ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಮಧ್ಯಪ್ರದೇಶದ ಇಂದೋರ್ ನ ನಿವಾಸಿ, ಪರಿಸರ ಪ್ರೇಮಿ ಡಾ. ಶಂಕರ್ ಲಾಲ್ ಗಾರ್ಗ್ ಹೇಳಿದರು.
ಸರ್ಕಾರಿ ಹುದ್ದೆಯಿಂದ ನಿವೃತ್ತಿಯಾದ ನಂತರ 22 ಎಕರೆ ಬಂಜರು ಭೂಮಿಯಲ್ಲಿ ಸುಮಾರು 50 ಸಾವಿರ ಮರಗಳನ್ನು ಬೆಳೆಸಲಾಗಿದೆ. ಪರಿಸರದೊಂದಿಗೆ ತಮ್ಮ ಜೀವನ ಸಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಮರಗಳನ್ನು ಬೆಳೆಸುವ ಯೋಜನೆ ತಮ್ಮದಾಗಿದೆ ಎಂದರು.
ಆಶಾ ಆರ್. ಕುಮಾರ್ ಮಾತನಾಡಿ, ಪಾಲಕರು ಮಕ್ಕಳಿಗೆ ವಿದ್ಯೆ ನೀಡುವ ಜೊತೆಗೆ ಸಂಸ್ಕಾರ ಕಲಿಸಬೇಕು. ಸಂಸ್ಕಾರವಿದ್ದರೆ ಮಾತ್ರ ಉತ್ತಮ ಬದುಕು ಸಾಗಿಸಲು ಸಾಧ್ಯ ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದರು.ಲಲಿತಾ ಪುರಸ್ಕಾರ ಗೌರವ ನೀಡಿ ಸನ್ಮಾನಿಸಿರುವುದು ತಮಗೆ ಅತೀವ ಸಂತಸ ಉಂಟು ಮಾಡಿದೆ. ಮತ್ತಷ್ಟು ಸಾಧನೆಗೆ ಪ್ರೇರಕವಾಗಿದೆ ಎಂದು ತಿಳಿಸಿದರು.
ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷೆ ಮಾತಾ ಚೈತನ್ಯಮಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಶಸ್ತಿ ಪುರಸ್ಕೃತರ ಸಾಧನೆ ಸರ್ವರಿಗೂ ಮಾದರಿಯಾಗಿದೆ. ಭಗವತಿ ನಾಮಸ್ಮರಣೆ, ಉತ್ತಮ ಸಂಸ್ಕಾರಗಳಿಂದ ಜೀವನದಲ್ಲಿ ಸಾಧನೆ ಸಾಧ್ಯವಾಗಲಿದೆ ಎಂದು ತಿಳಿಸಿದರು.ಸಾಹಿತಿ ಎಂ.ಎನ್.ಸುಂದರ್ ರಾಜ್, ದೊಡ್ಡಮ್ಮದೇವಿ ಉಪಾಸಕ ಸಿದ್ದಪ್ಪಾಜಿ ಮಾತನಾಡಿದರು.
ಇದೇ ವೇಳೆ ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಸಹಸ್ರಾರು ಮಹಿಳೆಯರಿಗೆ ಕಲಿಸುತ್ತಿರುವ ಆಶಾ ಆರ್.ಕುಮಾರ್ ಅವರಿಗೆ ಶ್ರೀ ಲಲಿತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮುಕ್ತಾಭಟ್ ನೇತೃತ್ವದಲ್ಲಿ ಸಾಮೂಹಿಕ ದುರ್ಗಾ ಕವಚ ಪಠಣ, ಗಾಯತ್ರಿ ವಿಶ್ವಕರ್ಮ ಭಜನಾ ಮಂಡಳಿಯ ಅನ್ನಪೂರ್ಣ ಕಾಳಚಾರ್ ನೇತೃತ್ವದಲ್ಲಿ ಭಜನೆ, ಕಾವ್ಯರಿಂದ ಗಾಯನ ಹಾಗೂ ಸನ್ಮತಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಟ್ರಸ್ಟ್ ನ ಕಾರ್ಯದರ್ಶಿ ಎಂ. ರಾಧಾ ಇತರರಿದ್ದರು. ನಿರೂಪಣೆಯನ್ನು ಪುರುಷೋತ್ತಮ್ ಹಾಗೂ ವಂದನಾರ್ಪಣೆಯನ್ನು ರಾಮಕೃಷ್ಣ ನಡೆಸಿಕೊಟ್ಟರು.
ಉತ್ಸವ ಮೂರ್ತಿಯ ಮೆರವಣಿಗೆ:
ಸಮಾರಂಭದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ದೊಡ್ಡಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಹಾಗೆಯೇ ದೊಡ್ಡಮ್ಮ ದೇವಾಲಯದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿತು. ಸುಮಾರು 10ಕ್ಕೂ ಹೆಚ್ಚು ಮಕ್ಕಳಿಗೆ ನಾಮಕರಣ ನಡೆಸಲಾಯಿತು. ಇದೇ ವೇಳೆ ಮಹಾಶಕ್ತಿ ವಾರ್ಷಿಕ ವಿಶೇಷ 2ನೇ ಸಂಚಿಕೆ ಬಿಡುಗಡೆ ಮಾಡಲಾಯಿತು.