ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮುದಾಯಗಳ ಸಹಕಾರವಿಲ್ಲದೆ ಅಭಿವೃದ್ಧಿ ಅಸಾಧ್ಯ. ಅಭಿವೃದ್ಧಿಯ ದೃಷ್ಟಿಯಿಂದ ಸರ್ವ ಸಮುದಾಯಗಳು ಪಕ್ಷ ರಾಜಕಾರಣವನ್ನು ಬದಿಗೊತ್ತಿ ಸಂಘಟಿತರಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಸಮುದಾಯದ ಮುಖಂಡರು ತಮ್ಮ ವೈಯಕ್ತಿಕ ಹಿತಾಸಕ್ತಿ ಬಂದಿಕೊಟ್ಟು ತಮಗೆ ಬೆಂಬಲವಾಗಿ ನಿಲ್ಲುವಂತೆ ಮನವಿ ಮಾಡಿದರು.
ಶಾಸಕನಾಗಿ ನಾನು ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುತ್ತಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಯಾವುದಾದರೊಂದು ಬೃಹತ್ ಕೈಗಾರಿಕೆ ತರುವತ್ತ ಪ್ರಯತ್ನಿಸುತ್ತಿದ್ದೇನೆ. ಈ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವರೂ ಆದ ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿದ್ದೇನೆ ಎಂದರು.ರಾಜ್ಯ ಸರ್ಕಾರ ಬೃಹತ್ ಕೈಗಾರಿಕೆಗೆ ಅಗತ್ಯವಾದ ಭೂಮಿ, ನೀರು ಮತ್ತಿತರ ಮೂಲ ಸೌಲಭ್ಯ ಒದಗಿಸಿಕೊಟ್ಟರೆ ಯಾವುದಾರೊಂದು ಕೈಗಾರಿಕೆಯನ್ನು ನನ್ನ ತಾಲೂಕಿನಲ್ಲಿ ಸ್ಥಾಪಿಸುವತ್ತ ಕುಮಾರಣ್ಣ ಒಲವು ಹೊಂದಿದ್ದಾರೆ. ಬೃಹತ್ ಕೈಗಾರಿಕೆಗೆ ಅಗತ್ಯವಾದ ಭೂಮಿ ಮತ್ತಿತರ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದೇನೆ ಎಂದರು.
ತಾಲೂಕಿನ ಮುರುಕನಹಳ್ಳಿ, ಶೀಳನೆರೆಗಳಲ್ಲಿ ತೋಟಗಾರಿಕಾ ಫಾರಂಗಳಿದ್ದು ಇಲ್ಲಿ ಸಾಕಷ್ಟು ಭೂಮಿಯಿದೆ. ಇಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ತೆರೆಯುವಂತೆ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.ಬಹುತೇಕ ನಾಯಕ ಸಮುದಾಯವರೇ ವಾಸಿಸುತ್ತಿರುವ ತಾಲೂಕಿನ ಕುಗ್ರಾಮ ಪೂವನಹಳ್ಳಿಯನ್ನು ಸಂಪೂರ್ಣ ಮಾದರಿ ಗ್ರಾಮವನ್ನಾಗಿ ಅಭಿವೃದ್ದಿಪಡಿಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕೆ ಕಾರಣಕರ್ತರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಬೇಕು ಎಂದರು.