ಅನರ್ಹ ಮತದಾರರು ಪಟ್ಟಿಯಿಂದ ಕೈಬಿಡಲು ವಿಶೇಷ ಸಮಗ್ರ ಪರಿಷ್ಕರಣೆ : ಡಾ.ಕುಮಾರ

KannadaprabhaNewsNetwork |  
Published : Oct 08, 2025, 01:00 AM IST
7ಕೆಎಂಎನ್ ಡಿ27 | Kannada Prabha

ಸಾರಾಂಶ

ಮತದಾರರು ತಮ್ಮ ಎಲ್ಲಾ ದಾಖಲೆಗಳು ಸರಿ ಇದೆ ಎಂದು ಧೃಢೀಕರಿಸಿ ಕೊಡಬೇಕು. ಮತದಾರರ ನಮೂನೆಯನ್ನು ಹಿಂದಿರುಗಿಸದೆ ಹೋದರೆ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗುತ್ತದೆ. ಮನೆಯಲ್ಲಿ ಇಲ್ಲದೆ ಹೊರಗಡೆ ಇರುವವರು ಆನ್ ಲೈನ್ ಮೂಲಕ ಸಹ ದೃಢೀಕರಿಸಿ ವಿವರ ಸಲ್ಲಿಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಅನರ್ಹ ಮತದಾರರು ಮತ ಪಟ್ಟಿಯಲ್ಲಿ ಇರಬಾರದು. ಅರ್ಹ ಮತದಾರರು ಮತದಾನ ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತದಾರರ ಪಟ್ಟಿಯಲ್ಲಿ ಮರಣ ಹೊಂದಿರುವವರ ಹೆಸರುಗಳಿವೆ. ಒಬ್ಬರ ಹೆಸರು ಎರಡು ಅಥವಾ ಹೆಚ್ಚಿನ ಕಡೆ ಮತದಾರರ ಪಟ್ಟಿಯಲ್ಲಿದೆ ಎಂಬ ದೂರುಗಳು ಸಾಮನ್ಯವಾಗಿ ಕೇಳಿಬರುತ್ತದೆ. ಅನರ್ಹ ಮತದಾರರ ಹೆಸರನ್ನು ಕೈಬಿಡಲು ವಿಶೇಷ ಸಮಗ್ರ ಪರಿಷ್ಕರಣೆ ಸಹಕಾರಿಯಾಗಲಿದೆ ಎಂದರು.

ಈಗಾಗಲೇ ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೂ ಬಿಎಲ್ಒಗಳನ್ನು ನೇಮಿಸಲಾಗಿದೆ, ಮತದಾರರ ವಿವರ ಒಳಗೊಂಡ ನಮೂನೆಯನ್ನು ಚುನಾವಣಾ ಆಯೋಗದಿಂದ ನೀಡಲಾಗುವುದು, ಬಿ.ಎಲ್.ಒ ಗಳು ನಮೂನೆಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ ಎಂದರು.

ಮತದಾರರು ತಮ್ಮ ಎಲ್ಲಾ ದಾಖಲೆಗಳು ಸರಿ ಇದೆ ಎಂದು ಧೃಢೀಕರಿಸಿ ಕೊಡಬೇಕು. ಮತದಾರರ ನಮೂನೆಯನ್ನು ಹಿಂದಿರುಗಿಸದೆ ಹೋದರೆ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗುತ್ತದೆ. ಮನೆಯಲ್ಲಿ ಇಲ್ಲದೆ ಹೊರಗಡೆ ಇರುವವರು ಆನ್ ಲೈನ್ ಮೂಲಕ ಸಹ ದೃಢೀಕರಿಸಿ ವಿವರ ಸಲ್ಲಿಸಬಹುದು ಎಂದರು.

ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, 1823 ಮತಗಟ್ಟೆಗಳಿವೆ. 15,62,916 ಮತದಾರರಿದ್ದಾರೆ. ವಿಶೇಷ ಸಮಗ್ರ ಪರಿಷ್ಕರಣೆಗಾಗಿ ವಿಧಾನಸಭಾ ಕ್ಷೇತ್ರವಾರು ಮತದಾರರ ನೋಂದಣಾಧಿಕಾರಿಗಳಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಮೀಕ್ಷೆ ಸುಗಮವಾಗಿ ನಡೆಸಲು ಬಿಎಲ್ ಓ ಶಿಬಿರಗಳನ್ನು 51 ಕಡೆ ಮಾಡಲಾಗುವುದು ಹಾಗೂ 272 ವೋಟರ್ ಫ್ಯಾಸಿಲಿಟೇಷನ್ (Facilitation ) ಕ್ಯಾಂಪ್ ಅನ್ನು ಮಾಡಲಾಗುವುದು ಎಂದರು.

ಪ್ರತಿ ವರ್ಷ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುವುದು. 2002ರಲ್ಲಿ ಸಮಗ್ರ ಮತದಾರರ ಪಟ್ಟಿ‌ ಪರಿಷ್ಕರಣೆ ನಡೆಸಲಾಗಿತ್ತು. ವಿವಿಧ ಪಕ್ಷಗಳ ಮುಖಂಡರು ವಿಶೇಷ ಸಮಗ್ರ‌ ಪರಿಷ್ಕರಣೆ ಕುರಿತು ಮತಗಟ್ಟೆಗಳ ಏಜೆಂಟರಿಗೆ ಮಾಹಿತಿ ನೀಡಬೇಕು ಎಂದರು.

1200 ಜನರಿಗಿಂತ ಹೆಚ್ಚು ಇರುವ ಮತಗಟ್ಟೆಗಳನ್ನು ವಿಭಾಗಿಸಿ ಹೆಚ್ಚುವರಿ ಮತಗಟ್ಟೆ ಸ್ಥಾಪನೆ ಮಾಡಲಾಗುವುದು, ಜಿಲ್ಲೆಯಲ್ಲಿ 100 ನೂತನ ಮತಗಟ್ಟೆಗಳನ್ನು ಸ್ಥಾಪನೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ‌.ಸಿ.ಶಿವಾನಂದ ಮೂರ್ತಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಅನೇಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಬರುತ್ತಾರೆ. ಪ್ರಸ್ತುತ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಎಲ್ಒಗಳ ಪಾತ್ರ ಬಹಳ ಮುಖ್ಯವಿದೆ ಎಂದರು.

ವಿವಿಧ ಪಕ್ಷಗಳ ಮುಖಂಡರು ಪ್ರತಿ ಮತಗಟ್ಟೆಗೂ ಒಬ್ಬೊಬ್ಬ ಬಿಎಲ್ ಒ ನೇಮಕ ಮಾಡಿ, ಯಾವ ರೀತಿ ಹೊಸ ಮತದಾರರನ್ನು ಪಟ್ಟಿಗೆ ಹೆಸರು ಸೇರಿಸಬೇಕು ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬುದರ ಬಗ್ಗೆ ತರಬೇತಿ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬುದರ ಕುರಿತು ಉಲ್ಲೇಖಿಸಲಾಗಿರುವ ಕೈಪಿಡಿ ನೀಡಲಾಯಿತು.

ಸಭೆಯಲ್ಲಿ ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ಜೆಡಿ ಎಸ್ ಪಕ್ಷದ ಮುಖಂಡ ನವೀನ್, ಜಿಲ್ಲಾ ಬಿಜೆಪಿ ಮುಖಂಡ ಎಂ.ಡಿ. ರಮೇಶ್, ಜಿಲ್ಲಾ ಬಿಎಸ್ಪಿ ಮುಖಂಡ ಶಿವಶಂಕರ್ ಹಾಗೂ ದಿನೇಶ್, ಜಿಲ್ಲಾ ಎಎಪಿಯ ಮುಖಂಡ ದಿನೇಶ್, ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ