ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹರ್ಷಿ ಶ್ರೀವಾಲ್ಮೀಕಿ ಅವರ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಮಂಗಳವಾರ ಆಚರಿಸಲಾಯಿತು.ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮಾತನಾಡಿ, ಭಾರತೀಯ ಸಂಸ್ಕೃತಿಗೆ ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವ ಶ್ರೇಷ್ಠ ಸ್ಥಾನಮಾನ ತಂದುಕೊಟ್ಟವರು ಆದಿಕವಿ ಮಹರ್ಷಿ ವಾಲ್ಮೀಕಿ ಅವರು. ವಿಶ್ವದ ಎಲ್ಲಾ ಶ್ರೇಷ್ಠ ಗ್ರಂಥಗಳಿ ಗಿಂತಲೂ ಅತ್ಯಂತ ಶ್ರೇಷ್ಠ ಹಾಗೂ ಪುರಾತನ ಮಹಾಕಾವ್ಯ ರಾಮಾಯಣವಾಗಿದೆ. ಇದು ಪ್ರತಿಯೊಂದು ಜೀವಕುಲದ ಬುನಾದಿಯಾಗಿದೆ ಎಂದರು.
ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿ, ಆದರ್ಶ ವ್ಯಕ್ತಿ ಆದರ್ಶ ರಾಜ, ಆದರ್ಶ ಸಂಬಂಧಗಳ ಮೌಲ್ಯವನ್ನು ಸಮಾಜಕ್ಕೆ ತೋರಿಸಿಕೊಟ್ಟ ಮೊದಲ ಮಹಾಕಾವ್ಯ ವಾಲ್ಮೀಕಿ ಅವರ ರಾಮಾಯಣ. ಇದರಲ್ಲಿ ರಾಮ ಒಂದು ಪಾತ್ರವಾಗಿದ್ದು, ಈ ಪಾತ್ರದ ಪರಿಕಲ್ಪನೆ ಕೊಟ್ಟವರು ವಾಲ್ಮೀಕಿ. ಆದರೆ, ವಾಲ್ಮೀಕಿ ಅವರ ಹೆಸರು ಹೆಚ್ಚು ಪ್ರಚಲಿತಕ್ಕೆ ಬರಲಿಲ್ಲ ಎಂದು ವಿಷಾದಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಮಾತನಾಡಿದರು. ಶಿಕ್ಷಕ ಶಿವಮಾದಯ್ಯ ಅವರು ವಾಲ್ಮೀಕಿ ಅವರ ಕುರಿತು ಪ್ರಧಾನ ಭಾಷಣ ಮಾಡಿದರು.
ಇದೇ ವೇಳೆ ಗಂಗಾಮತ ಸಮಾಜದ ಹಿರಿಯ ಮುಖಂಡರು, ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.ಜಾತಿ, ಧರ್ಮದ ಸಂಕೋಲೆ ದೂರ ಮಾಡಿದ ವಾಲ್ಮೀಕಿ: ಕೆ.ಬಿ.ಚಂದ್ರಶೇಖರ್
ಕನ್ನಡಪ್ರಭ ವಾರ್ತೆ ಕಿಕ್ಕೇರಿಜಾತಿ ಧರ್ಮದ ಸಂಕೋಲೆ ದೂರ ಮಾಡಿ ತಮ್ಮ ಕೃತಿ ಮೂಲಕ ಜ್ಞಾನದ ಬೆಳಕು ನೀಡಿದ ವಾಲ್ಮೀಕಿ ಸಮಾಜ ಸುಧಾರಕ ಮಹರ್ಷಿಗಳು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್ ತಿಳಿಸಿದರು.
ಗ್ರಾಪಂ ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ಅಜ್ಞಾನ, ಅನಕ್ಷರತೆಯ ಅಂಧಕಾರದಲ್ಲಿದ್ದಾಗ ವಾಲ್ಮೀಕಿ ಅವರು ಬದುಕಿಗಾಗಿ ಸಿಕ್ಕ ಪ್ರಾಣಿಕೊಂದು, ಹಣ, ಸಂಪತ್ತಿಗಾಗಿ ದರೋಡೆ ಮಾಡುತ್ತಾ ಬೇಡನಾಗಿದ್ದನು. ನಾರದ ಮುನಿಗಳಿಂದ ಪರಿವರ್ತನೆಯಾಗಿ ಶ್ರೇಷ್ಟನಾಗಿ ರತ್ನಾಕರ ಹೆಸರಿನಿಂದ ಬದಲಾಗಿ ಮಹರ್ಷಿ ಯಾದರು ಎಂದರು.ಪಿಡಿಒ ಸಿ.ಚಲುವರಾಜು ಮಾತನಾಡಿ, ಜಾತಿ, ಧರ್ಮಗಳ ಸಂಕೋಲೆಯಿಂದ ಹೊರಬಂದಲ್ಲಿ ಮಾತ್ರ ವ್ಯಕ್ತಿತ್ವ ವಿಕಸನವಾಗಲಿದೆ. ವಿಶ್ವಮಾನವರಾಗಿ ಬದುಕಲು ವಾಲ್ಮೀಕಿ ರಾಮಾಯಣ ಅರಿತರೆ ಈ ನಾಡು ಗಾಂಧೀಜಿಯವರ ಕನಸಿನಂತೆ ರಾಮರಾಜ್ಯವಾಗಲಿದೆ ಎಂದು ನುಡಿದರು.
ಇದೇ ವೇಳೆ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿ ಪಾಪೇಗೌಡ, ಲೆಕ್ಕ ಸಹಾಯಕ ವಾಸು, ಸದಸ್ಯರಾದ ಕೆ.ಜಿ.ಪುಟ್ಟರಾಜು, ರೇಣುಕಾ, ಮುಖಂಡರಾದ ಅರುಣಿ, ಶ್ರೀಕಾಂತ್, ಪೌರಕಾರ್ಮಿಕರು ಉಪಸ್ಥಿತರಿದ್ದರು.