ಯಲ್ಲಾಪುರ: ಸಮಾಜದಲ್ಲಿಂದು ಯುವಜನತೆ ದಾರಿ ತಪ್ಪುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀಗಳು ಭಗವದ್ಗೀತೆ ಪ್ರತಿಯೊಬ್ಬರ ಮನ, ಮನೆಗಳಲ್ಲಿ ಪಠಣ ಮಾಡಬೇಕು, ಅಧ್ಯಯನ ಮಾಡಬೇಕು. ನಮಗೆ ಬರುವ ಸಮಸ್ಯೆ, ಕ್ಲೇಶಗಳನ್ನು ಪರಿಹರಿಸುವ ಜತೆಗೆ ಸಾಂಸ್ಕೃತಿಕ ಬದುಕನ್ನು ರೂಪಿಸುತ್ತದೆ ಎಂಬ ದೃಷ್ಟಿಯಿಂದ ಕಳೆದ ೧೭ ವರ್ಷಗಳಿಂದ ನಾಡಿನಾದ್ಯಂತ ಗೀತಾ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ನಾವೆಲ್ಲರೂ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಕೆ.ವಿ. ಭಟ್ಟ ತಿಳಿಸಿದರು.ನ. ೪ರಂದು ಪಟ್ಟಣದ ಶಾರದಾಂಬಾ ದೇವಸ್ಥಾನದಲ್ಲಿ ಗೀತಾ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿ, ಭಗವದ್ಗೀತೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡಾ ಅಧ್ಯಯನ ಮಾಡಿ, ಅದರ ಮಹತ್ವ ಪ್ರಭಾವವನ್ನರಿತು ತಮ್ಮ ನೆಲದಲ್ಲಿ ಗೀತೆಯನ್ನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಕೇವಲ ಹಣವೇ ಸರ್ವಸ್ವ ಎಂಬ ಭಾವನೆ ನಮ್ಮ ಯುವಕರಿಗೆ ಬೆಳೆದಿದೆ. ಅದು ಕೇವಲ ಭ್ರಮೆ. ಬದುಕಿಗೆ ಅಗತ್ಯವಾದ ಹಣ ಸಂಪಾದನೆ ಮಾಡಬೇಕು ಸರಿ. ಎಂದ ಅವರು, ಯಲ್ಲಾಪುರದಲ್ಲಿ ಗೀತಾ ಅಭಿಯಾನ ಯಶಸ್ವಿಯಾಗಿ ನಡೆಯಲು ಮಾತೆಯರೇ ಕಾರಣ. ಅಲ್ಲದೇ, ಶ್ರೀಮಠದ ಆದೇಶ ಬಂತೆಂದರೆ ಪುರುಷರು, ಮಾತೆಯರು ಸೇರಿದಂತೆ ಎಲ್ಲರೂ ಭಕ್ತಿಭಾವದಿಂದ ಗುರುಗಳ ಆಜ್ಞೆಯನ್ನು ಶಿರಸಾ ವಹಿಸಿ, ಮಾಡುವ ಸಂಸ್ಕೃತಿ ಯಲ್ಲಾಪುರ ತಾಲೂಕಿನಲ್ಲಿದೆ. ಹಾಗಾಗಿಯೇ ಇಲ್ಲಿ ಉತ್ತಮ ಸಂಸ್ಕೃತಿ ಉಳಿಯುವಂತಾಗಿದೆ ಎಂದರು. ಸರ್ವವಲ್ಲೀ ಮಠದ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ಈ ವರ್ಷ ವಿಜಯಪುರದಲ್ಲಿ ಮಂಗಳವಾರ ಶ್ರೀಗಳು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೇ ಗೀತಾ ಜಯಂತಿಯಂದು ವಿಜಯಪುರದಲ್ಲೇ ಈ ವರ್ಷ ಸಮಾರೋಪ ಸಮಾರಂಭ ನಡೆಯಲಿದೆ ಎಂದ ಅವರು, ತಾಲೂಕಿನ ಜಿಲ್ಲೆಯ ಸಮಸ್ಥರೂ ಅಭಿಯಾನದಲ್ಲಿ ಕೈಜೋಡಿಸುವಂತೆ ವಿನಂತಿಸಿದರು.ಸ್ವರ್ಣವಲ್ಲೀ ಮಠದ ಸರ್ವಜ್ಞೇಂದ್ರ ಪ್ರತಿಷ್ಠಾನದ ಸದಸ್ಯರಾದ ವಿಷ್ಣು ಹೆಗಡೆ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ಜಿ. ಬೋಡೆ, ಸೀಮಾಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಜಿಲ್ಲಾ ಪ್ರತಿನಿಧಿ ಶಂಕರ ಭಟ್ಟ ತಾರೀಮಕ್ಕಿ, ಮಾಜಿ ಅಧ್ಯಕ್ಷ ಎಸ್.ಎಲ್. ಜಾಲೀಸತ್ಗಿ, ಪ್ರಮುಖರಾದ ಎಸ್.ವಿ. ಭಟ್ಟ, ಕೆ.ಟಿ. ಹೆಗಡೆ, ಕೇಂದ್ರ ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೇಮನೆ, ನಗರಾಧ್ಯಕ್ಷೆ ರಮಾ ದೀಕ್ಷಿತ, ಮತ್ತಿತರರು ಉಪಸ್ಥಿತರಿದ್ದರು. ಅಭಿಯಾನದ ತಾಲೂಕಾಧ್ಯಕ್ಷ ಜಿ.ಎನ್. ಭಟ್ಟ ತಟ್ಟೀಗದ್ದೆ ಸ್ವಾಗತಿಸಿ, ನಿರ್ವಹಿಸಿದರು.