ಬಳ್ಳಾರಿ: ಅಯೋಡಿನ್ ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾಗುವ ಒಂದು ಸೂಕ್ಷ್ಮ ಪೋಷಕಾಂಶವಾಗಿದೆ. ಪ್ರತಿಯೊಬ್ಬರು ದಿನನಿತ್ಯ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪು ಬಳಸುವ ಮೂಲಕ ಆಯೋಡಿನ್ ಕೊರತೆಯ ನ್ಯೂನತೆ ತಡೆಗಟ್ಟಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ. ಹೇಳಿದರು.
ಅಯೋಡಿನ್ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ. ಥೈರಾಯಿಡ್ ಗ್ರಂಥಿಯು ನಮ್ಮ ದೇಹಕ್ಕೆ ಅವಶ್ಯಕವಿರುವ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಲು ಅಯೋಡಿನ್ ಅಂಶ ಪೂರಕವಾಗಿದೆ. ಹಾಗಾಗಿ ದಿನನಿತ್ಯ ಹಸಿರು ಸೊಪ್ಪು ಮತ್ತು ತರಕಾರಿ ಸೇವನೆಯ ಮೂಲಕ ತಾಜಾ ತರಕಾರಿಯೊಂದಿಗೆ ಅಯೋಡಿನ್‌ಯುಕ್ತ ಉಪ್ಪು ಬಳಕೆ ಮಾಡುಬೇಕು ಎಂದು ಅವರು ತಿಳಿಸಿದರು.
ಉಪ್ಪಿನ ಜಾಡಿಯನ್ನು ಭದ್ರವಾಗಿ ಮುಚ್ಚುವ ಮೂಲಕ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನ್ಯತೆಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮೈಕ್ರೋಬಯಾಲಾಜಿಸ್ಟ್ ಶರತ್‌ಬಾಬು.ಕೆ ಅವರು ಮಾತನಾಡಿ, ಅಯೋಡಿನ್ ಕೊರತೆಯಿಂದ ಹೆಚ್ಚಾಗಿ ಮಕ್ಕಳು, ವಯಸ್ಕರು, ಗರ್ಭಿಣಿ ಮಹಿಳೆಯರಲ್ಲಿ ನ್ಯೂನತೆಗಳು ಕಂಡುಬರುತ್ತವೆ. ಮುಖ್ಯವಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕುಬ್ಜತನ, ದೇಹದ ಅಂಗಾಂಗಳ ಕುಂಠಿತ ಬೆಳವಣಿಗೆ, ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯ ನಿರ್ವಹಣೆಯಲ್ಲಿ ವೈಫಲ್ಯತೆ, ಗಳಗಂಡ ರೊಗ, ಗರ್ಭಿಣಿಯರಲ್ಲಿ ಪದೇಪದೇ ಗರ್ಭಪಾತ, ಸಂತಾನೋತ್ಪತ್ತಿಯ ತೊಂದರೆ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಂಕಪ್ಪ ಮಾತನಾಡಿ, ಮನುಷ್ಯನ ಆರೋಗ್ಯ ಸ್ಥಿರವಾಗಿರುವಲ್ಲಿ ಅಯೋಡಿನ್ ಅಂಶ ತುಂಬ ಅವಶ್ಯಕವಾಗಿದೆ. ಆರೋಗ್ಯ ಇಲಾಖೆಯಿಂದ ತಿಳಿಸಲಾದ ಮುಂಜಾಗ್ರತಾ ಕ್ರಮಗಳನ್ವಯ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ತಮ್ಮ ಕುಟುಂಬರಿಗೆ ಮತ್ತು ಅಕ್ಕಪಕ್ಕದ ಸಾರ್ವಜನಿಕರಿಗೆ ಅಯೋಡಿನ್‌ಯುಕ್ತ ಉಪ್ಪನ್ನು ಬಳಸಲು ತಿಳಿಸಬೇಕು ಮತ್ತು ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ನಾಗರಾಜಪ್ಪ, ಗಾದಿಲಿಂಗಪ್ಪ, ತಿಮ್ಮಪ್ಪ, ಅಕ್ಕಿ ಮಲ್ಲಿಕಾರ್ಜುನ, ಎನ್.ಸಿ.ಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಜಬೀನ್ ತಾಜ್, ಜಿಲ್ಲಾ ಮೈಕ್ರೋ ಬಯಾಲಾಜಿಸ್ಟ್ ಶರತ್ ಬಾಬು, ಜಿಲ್ಲಾ ತಂಬಾಕು ಸಲಹೆಗಾರ ಪ್ರಶಾಂತ್ ಸೇರಿದಂತೆ ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿ, ಜಿಲ್ಲಾ ಕಾಲರ ನಿಯಂತ್ರಣ ತಂಡದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.