ಕನ್ನಡಪ್ರಭ ವಾರ್ತೆ, ಶಿಕಾರಿಪುರ ರಾಜ್ಯದ ಸಮಸ್ತ ಜನತೆಯ ಮಾತೃಭಾಷೆ ಕನ್ನಡವಾಗಿದ್ದು, ಆಂಗ್ಲಭಾಷೆ ಮೋಹ ತೊರೆದು ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ನಿತ್ಯ ಬಳಸಬೇಕು. ಆಗ ಮಾತ್ರ ಭಾಷೆ ಬೆಳವಣಿಗೆ ಜತೆಗೆ ನಾಡಿನ ಬಗ್ಗೆ ಅಭಿಮಾನ ಮೂಡಲು ಸಾಧ್ಯ ಎಂದು ತಹಸೀಲ್ದಾರ್ ಮಲ್ಲೇಶ ಬೀರಪ್ಪ ಪೂಜಾರ್ ಹೇಳಿದರು. ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ವಿವಿಧ ಇಲಾಖೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಯುವಕ ಸಂಘ ಸಹಿತ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದ 68ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಕನ್ನಡವನ್ನು ಮಾತೃಭಾಷೆಯನ್ನಾಗಿ ಬಳಸಬೇಕು. ಆ ಮೂಲಕ ಭಾಷೆ, ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಹೀಗೆ 32ಕ್ಕೂ ಹೆಚ್ಚು ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು 1895 ರಲ್ಲಿ ಆಲೂರು ವೆಂಕಟರಾಯರು ವಿದ್ಯಾವರ್ಧಕ ಸಂಘವನ್ನು ಹುಟ್ಟುಹಾಕಿದ್ದರು. ಅದರ ಮುಂದುವರಿದ ಭಾಗವೇ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು ಎಂದರು. 1924ರಲ್ಲಿ 552 ಸಂಸ್ಥಾನವಾಗಿದ್ದ ಭಾರತವನ್ನು ಮಹಾತ್ಮ ಗಾಂಧೀಜಿ ಅವರು ದೇಶದ ವಿವಿಧ ಭಾಷಾನುಸಾರವಾಗಿ ಪ್ರಾಂತ್ಯಗಳನ್ನು ರಚಿಸಬೇಕು ಎಂದು ಕರೆ ನೀಡಿದ್ದರ ಫಲವಾಗಿ ದೇಶದ ಸ್ವಾತಂತ್ರ್ಯಾನಂತರ 1956ರ ರಲ್ಲಿ 32 ಪ್ರಾಂತ್ಯವಾಗಿದ್ದ ನಮ್ಮ ರಾಜ್ಯ ಮೈಸೂರು ರಾಜ್ಯವಾಗಿ, ಆನಂತರ 1973ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯದ ಹೆಸರನ್ನು ತೆಗೆದು ಕರ್ನಾಟಕ ರಾಜ್ಯವನ್ನಾಗಿಸಿ ನಾಮಕರಣ ಮಾಡಿದ್ದಾರೆ. ಅಂದಿನಿಂದ ಕರ್ನಾಟಕ ರಾಜ್ಯವಾಗಿರುವ ನಮ್ಮ ರಾಜ್ಯದ ಭಾಷೆ ಕನ್ನಡವಾಗಿ ಮುಂದುವರಿದಿದೆ ಎಂದು ವಿವರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಬಲಿಷ್ಠ ನಾಡು ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮಕ್ಕಳನ್ನು ಶಾಲೆಗೆ ದಾಖಲಿಸುವಾಗ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿಸಬೇಕು. ಇದರಿಂದ ಎಲ್ಲ ಭಾಷೆಗಳನ್ನೂ ಸುಲಲಿತವಾಗಿ ಕಲಿಯಬಹುದು. ಆಂಗ್ಲ ಮಾಧ್ಯಮ ಕೇವಲ ಕಲಿಕೆಗಾಗಿ ಇರಲಿ ಎಂದು ಸಲಹೆ ನೀಡಿದರು. ಪುರಸಭಾ ಸದಸ್ಯ ಪಾಲಾಕ್ಷಪ್ಪ, ರೂಪಕಲಾ ಹೆಗಡೆ, ರೇಖಾಬಾಯಿ, ತಾಪಂ ಇಒ ಪರಮೇಶ್, ಪೊಲೀಸ್ ಉಪಾಧೀಕ್ಷಕ (ಡಿವೈಎಸ್‌ಪಿ) ಶಿವಾನಂದ ಮದರಖಂಡಿ, ಬಿಇಒ ಶಶಿಧರ್, ಪುರಸಭಾ ಮುಖ್ಯಾಧಿಕಾರಿ ಭರತ್ ಸಹಿತ ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ, ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜು ಮತ್ತಿತರರು ಹಾಜರಿದ್ದರು. - - - -1ಕೆಎಸ್‌ಕೆಪಿ2: ಶಿಕಾರಿಪುರದಲ್ಲಿ ಬುಧವಾರ ರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಧ್ವಜಾರೋಹಣ ನೆರವೇರಿಸಿದರು.