ಕನ್ನಡಪ್ರಭ ವಾರ್ತೆ ಹಾಸನ ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆಗೆದು ದೇವಿ ದರ್ಶನ ನೀಡುವ ಒಂದು ದಿನ ಮೊದಲು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರು ದೇಗಲಕ್ಕೆ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲಿಸಿದಲ್ಲದೇ ಮಾಹಿತಿ ಪಡೆದು ಕೆಲ ಸಲಹೆ ಸೂಚನೆ ನೀಡಿದರು. ಗುರುವಾರ ಮಧ್ಯಾಹ್ನ ೧೨ಕ್ಕೆ ಹಾಸನಾಂಬೆ ದೇಗುಲದ ಬಾಗಿಲು ತೆಗೆದು ದರ್ಶನ ನೀಡಲಿದ್ದು, ಈ ವೇಳೆ ಪ್ರತಿನಿತ್ಯ ಸಾವಿರಾರು ಜನರು ವಿವಿಧ ಭಾಗಗಳಿಂದ ಆಗಮಿಸಲಿದ್ದು, ಈ ನಿಟ್ಟಿನಲ್ಲಿ ಭಕ್ತರಿಗೆ ಯಾವ ಸಮಸ್ಯೆ ಆಗಬಾರದೆಂದು ಈ ಬಾರಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಮಂತ್ರಿಗಳು ಬುಧವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲು ಪಾಲ್ಗೊಂಡು ನಂತರ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದರು. ಮುಖ್ಯದ್ವಾರದಿಂದಲೇ ಕಾಮಗಾರಿಯನ್ನು ವೀಕ್ಷಣೆ ಮಾಡುತ್ತಾ ಒಳ ಪ್ರವೇಶ ಮಾಡಿದ ಅವರು, ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮತ್ತು ಉಪವಿಭಾಗಧಿಕಾರಿ ಮಾರುತಿ ಅವರಿಂದ ಮಾಹಿತಿ ಪಡೆದರು. ಹಾಸನಾಂಬೆ ದರ್ಶನ ಮಾಡಲು ಗರ್ಭಗುಡಿ ಬಳಿ ಆಗಮಿಸುವಾಗ ಯಾರಿಗೆ ಸೆಕೆ ಆಗದಂತೆ ಎಸಿ ಅಳವಡಿಸಲಾಗಿತ್ತು. ಭಕ್ತರು ಬರುವ ಸರದಿ ಸಾಲು ವೀಕ್ಷಿಸಿದಲ್ಲದೇ ದರ್ಬಾರ್ ಗಣೇಶನ ಗುಡಿ ಬಳಿ ಹೋಗಿ ಈ ರೀತಿ ಹೆಸರು ಇರುವ ಬಗ್ಗೆಯೂ ಪ್ರಶ್ನೆ ಮಾಡಿದರು. ದೇಗುಲದ ಒಳ ಪ್ರವೇಶ ಮಾಡಿದರು. ನಂತರ ಸಿದ್ದೇಶ್ವರ ದೇವಾಲಯದ ಬಳಿ ಬಂದರು. ಡೆಕೋರೇಟ್ ಮಾಡುವ ಹೂವನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಕೇಳಿದರು. ನಂತರ ಹಾಸನಾಂಬೆ ತುಲಾಭಾರ ನೋಡಿದರು. ಇದಾದ ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾದ ವಿಡಿಯೋ ವೀಕ್ಷಣೆ ಮಾಡುವ ಟಿವಿ ರೂಂ ವೀಕ್ಷಿಸಿದರು. ನಂತರ ಹಾಸನಾಂಬೆ ದೇಗುಲ ಹಿಂಭಾಗ ಮತ್ತು ಎಡ ಭಾಗ ಹೊರ ಬಂದು ಮಾಹಿತಿ ಕೇಳಿದರು. ಕೆಲ ಸಮಯ ಹಾಸನಾಂಬೆ ದೇವಾಯಲದಲ್ಲೆ ಜಿಲ್ಲಾ ಉಸ್ತುವಾರಿ ಸಚಿವರು ಇದ್ದು, ನಂತರ ಮುಂದಿನ ಪ್ರಯಾಣ ಬೆಳೆಸಿದರು. ಇದೆ ವೇಳೆ ಶಾಸಕ ಎಚ್.ಪಿ. ಸ್ವರೂಪ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಪೂರ್ಣಿಮ, ಅಪರ ಜಿಲ್ಲಾಧಿಕಾರಿ ಶಾಂತಲಾ, ತಹಸೀಲ್ದಾರ್ ಶ್ವೇತಾ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕೆಪಿಸಿಸಿ ಸದಸ್ಯ ಹೆಚ್.ಕೆ. ಮಹೇಶ್, ಮುಖಂಡರಾದ ಬನವಾಸೆ ರಂಗಸ್ವಾಮಿ, ಅಸ್ಲಾಂ ಪಾಷಾ, ಕಡಾಕಡಿ ಪೀರ್ ಸಾಹೇಬ್, ಚಂದ್ರು ಇತರರು ಉಪಸ್ಥಿತರಿದ್ದರು.