ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಸುರಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಧಾರವಾಡದ ಕರಕುಶಲ ವಿಭಾಗದ ಸಹಾಯಕ ನಿರ್ದೇಶಕ ಕಿರಣ್ ವಿ.ಎಸ್., ಸುರಪುರದ ಗರುಡಾದ್ರಿ ಕಲೆ, ಅಧ್ಯಯನದ ವರದಿ ಕುರಿತಾದ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆಗೆ ನಾಡಿನ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ ನಾನು ಕೂಡ ಕಲೆಯ ಅಧ್ಯಯನದಿಂದ ಉನ್ನತ ವ್ಯಾಸಾಂಗ ಮಾಡಿದ್ದು ಮುಂದೆ ಈ ಕಲೆಯ ಕುರಿತು ವಿದ್ಯಾ ಕೇಂದ್ರವನ್ನು ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ಸುರಪುರದ ಗರುಡಾದ್ರಿ ಕಲೆ, ಅಧ್ಯಯನ ವರದಿಯ ಕೃತಿ ರಚಿಸಿರುವ ಕಿರಣ್ ವಿ.ಎಸ್. ಮಾತನಾಡಿ, ದೇಶದಲ್ಲಿ ನಶಿಸಿ ಹೋಗುತ್ತಿರುವ 19 ಕಲೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಸುರಪುರದ ಗರುಡಾದ್ರಿ ಕಲೆಯೂ ಒಂದಾಗಿದ್ದು ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತ ಸರಕಾರದ ವಸ್ತ್ರ ಮಂತ್ರಾಲಯದ ನಮ್ಮ ಕರಕುಶಲ ವಿಭಾಗದಿಂದ ಇದರ ಅಧ್ಯಯನ ನಡೆಸಿ ವರದಿಯನ್ನು ಕೂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದ್ದು,ಇಂದಿನ ಕಾರ್ಯಕ್ರಮದಲ್ಲಿ ಸುರಪುರದ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಅವರೇ ಕೃತಿಯನ್ನು ಬಿಡುಗಡೆ ಮಾಡಿರುವುದು ಅತೀವ ಸಂತೋಷ ಉಂಟು ಮಾಡಿದೆ ಎಂದರು.ಕಲಬುರಗಿಯ ಕಲಾವಿದ ಡಾ.ರೆಹಮಾನ್ ಪಟೇಲ್ ಕೃತಿಯ ಕುರಿತು ಮಾತನಾಡಿದರು. ಅಲ್ಲದೆ ಕಲಾವಿದ ಜಗದೀಶ್ ಎಂ. ಕಾಂಬಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸುರಪುರದ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಕೃತಿ ಲೋಕಾರ್ಪಣೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್ ನಿಷ್ಠಿ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಚಂದ್ರಶೇಖರ್ ವಾಯ್ ಶಿಲ್ಪಿ, ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಶರಣಬಸಪ್ಪ ಸಾಲಿ ಹಾಜರಿದ್ದರು.
ಸಗರ ನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿದರು, ವಿದ್ಯಾರ್ಥಿನಿ ಶ್ವೇತ ಹನುಮಂತರಾಯ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಶಿವಕುಮಾರ ಮಸ್ಕಿ ಸ್ವಾಗತಿಸಿದ್ದು, ಸಾಹಿತಿ ಜಾವಿದ್ ಹುಸೇನ್ ವಂದಿಸಿದರು.ಮುಖಂಡರಾದ ಶ್ರೀಹರಿ ರಾವ್ ಆದವಾನಿ, ಪಿಎಸ್ಐ ಕೃಷ್ಣ ಸುಬೇದಾರ್, ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಯಾಳವಾರ, ದೇವು ಹೆಬ್ಬಾಳ, ರಾಜಗೋಪಾಲ ವಿಭೂತೆ, ವೆಂಕಟೇಶ ಭಕ್ರಿ ಅನೇಕರು ಭಾಗವಹಿಸಿದ್ದರು.