ಕನ್ನಡಪ್ರಭ ವಾರ್ತೆ ಕುಶಾಲನಗರ
ಕರ್ನಾಟಕ ಏಕೀಕರಣ ವಿಷಯದಲ್ಲಿ ಪ್ರತಿಯೊಬ್ಬರ ಕೊಡುಗೆಯನ್ನು ಮೆಲುಕು ಹಾಕಲೇಬೇಕಾಗಿದೆ ಎಂದು ಉಪನ್ಯಾಸಕ ಹಂಡ್ರಂಗಿ ನಾಗರಾಜ ಹೇಳಿದರು.ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಅನುಗ್ರಹ ಪದವಿ ಮತ್ತು ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಏಕೀಕರಣ ಮತ್ತು ಸಾಹಿತ್ಯ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೃತಿಗಳ ಮೂಲಕ ನಾಡಿನ ಜನರನ್ನು ಎಚ್ಚರಿಸಿದ ಸಾಹಿತಿಗಳ ಸಮಗ್ರ ಮಾಹಿತಿ ಒದಗಿಸಿದರು.
ಕಾರ್ಯಕ್ರಮವನ್ನು ಅನುಗ್ರಹ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಕೆ.ಸತೀಶ್ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಕನ್ನಡಿಗರ ಮೇಲಿನ ದಬ್ಬಾಳಿಕೆ ವಿರೋಧಿಸಿ ಕನ್ನಡದ ಅಸ್ತಿತ್ವ, ಉಳಿವಿಗಾಗಿ ಆರಂಭಗೊಂಡ ಹೋರಾಟದ ಫಲವೇ ಈ ಏಕೀಕರಣ ಎಂದು ತಿಳಿಸಿದರು. ಸನ್ನಡತೆಯಿಂದ ಮಾತ್ರ ವಿದ್ಯೆ, ಅಧಿಕಾರ, ಸಂಪತ್ತಿಗೆ ಮೌಲ್ಯ ಲಭಿಸಲಿದ್ದು ವಿದ್ಯಾರ್ಥಿಗಳು ಇದನ್ನು ಮನಗಾಣಬೇಕಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ಕರ್ನಾಟಕ ಏಕೀಕರಣ ಹಾಗೂ ಕನ್ನಡ ರಾಜ್ಯೋತ್ಸವ ಎರಡೂ ಒಂದೇ ಅಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಅರಿತುಕೊಳ್ಳುವುದು ಅವಶ್ಯಕತೆಯಿದೆ. ಪತ್ರಕರ್ತರು, ಉಪನ್ಯಾಸಕರು, ಸಾಹಿತಿಗಳು, ವ್ಯಾಪಾರಿಗಳು, ಕಲಾವಿದರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತಿಹಾಸವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅರಿತುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮ ಕೊಡುಗೆ ನೀಡಬೇಕಿದೆ ಎಂದು ಕರೆ ನೀಡಿದರು.
ಕಾಲೇಜು ಪ್ರಾಂಶುಪಾಲ ಹೆಚ್.ಬಿ.ಲಿಂಗಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಭಾರದ್ವಾಜ್ ಆನಂದತೀರ್ಥ, ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖ ಕೆ. ಕೆ. ನಾಗರಾಜ ಶೆಟ್ಟಿ ಸೇರಿದಂತೆ ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.