ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ದಬ್ಬೇಘಟ್ಟ ಹೋಬಳಿಯ ಮುದಿಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಭದ್ರಕಾಳಿದೇವಿ ಹಾಗೂ ನವಗ್ರಹ ದೇವಾಲಯಗಳ ಶಿಲಾಮಂಟಪಗಳ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷ ನಮ್ಮ ದುರ್ದೈವಕ್ಕೆ ಸರಿಯಾದ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಬೋರ್‌ವೆಲ್‌ಗಳಲ್ಲಿ ನೀರು ಸಿಗದಂತಾಗಿದೆ. ತೋಟಗಳು ಒಣಗಿ ಹೋಗುತ್ತಿವೆ. ನಾಡಿನ ಜನರ ಪೂಜಾ ಕೈಂಕರ್ಯಗಳಿಗೆ ದೇವರು ಕರುಣಿಸಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ತುಂಬಿ ರೈತರಿಗೆ ಒಳ್ಳೆಯ ಕಾಲ ಬರಲು ಸಾಧ್ಯ. ಹಾಗಾಗಿ ದೇಶಕ್ಕೆ ಉತ್ತಮವಾಗಿ ಮಳೆ, ಬೆಳೆಯಾಗಿ ದೇಶದ ಜನರು ನಿಶ್ಚಿಂತೆಯಿಂದಿರಲು ನಾನೂ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಾಡಿನ ಉದ್ದಗಲಕ್ಕೂ ಈ ರೀತಿಯ ಧರ್ಮ ಕಾರ್ಯಗಳನ್ನು ಜನರು ಕೈಗೊಳ್ಳುವುದರಿಂದ ದೇವರ ಅನುಗ್ರಹವಾಗಿ ನಾಡಿಗೆ ಒಳಿತಾಗಲಿದೆ ಎಂದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿ ರೈತರ ಪರ ಹೋರಾಟ ಮಾಡಿದವರು ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತ್ರ. ಇವರಿಬ್ಬರೇ ಹಲವು ಹೋರಾಟಗಳ ಮೂಲಕ ರೈತರಿಗೆ ನ್ಯಾಯ ಕೊಡಿಸಿದ್ದಾರೆ. ನಾವು ದೇವರ ನಂಬಿ ಜೀವನ ನಡೆಸುವವರು. ಪ್ರತಿ ಗ್ರಾಮದಲ್ಲಿ ದೇವಾಲಯಗಳನ್ನು ನಿರ್ಮಿಸಿ ಪೂಜೆ ಮಾಡುವುದು ನಮ್ಮ ಸನಾತನ ಧರ್ಮದಲ್ಲಿನ ಒಂದು ಭಾಗವಾಗಿದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಮಸಾಲ ಜಯರಾಮ್ ಮಾತನಾಡಿದರು.
ಕೇಂದ್ರದ ಅಕ್ಕಿ ಯೋಜನೆಯನ್ನು ಸದ್ಬಳಸಿಕೊಳ್ಳಿಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಮಾತನಾಡಿ ನಾರಿಶಕ್ತಿ, ಯುವಶಕ್ತಿ, ರೈತಶಕ್ತಿ ಮತ್ತು ದಲಿತ ಶಕ್ತಿಗಳು ಒಂದಾದರೆ ನಮ್ಮ ದೇಶವನ್ನು ಬಹಳ ಎತ್ತರಕ್ಕೆ ಕೊಂಡಯ್ಯಬಹುದು ಎಂದು ತಿಳಿಸಿದ್ದಾರೆ. ಬಡವ, ಶ್ರೀಮಂತರೆಂಬ ಭೇಧವಿಲ್ಲದೇ ಕೇವಲ ೨೯ ರು. ಗಳಿಗೆ ಉತ್ತಮ ಗುಣಮಟ್ಟದ ಒಂದು ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.