ವಿಕಸಿತ ಭಾರತ ಮೋದಿ ಗುರಿ: ಕಾಗೇರಿ

KannadaprabhaNewsNetwork |  
Published : Apr 29, 2024, 01:38 AM ISTUpdated : Apr 29, 2024, 01:39 AM IST
ಕಾಗೇರಿ | Kannada Prabha

ಸಾರಾಂಶ

ದೇಶದ ರಕ್ಷಣೆಗೆ ಮೋದಿ ಬೇಕಿದೆ. ಅದೆಷ್ಟೋ ವರ್ಷಗಳಿಂದ ರಾಮಮಂದಿರ ಆಗಿರಲಿಲ್ಲ. ಮೋದಿ, ಯೋಗಿ ಪ್ರಯತ್ನದಿಂದ ಭವ್ಯ ರಾಮಂದಿರ ನಿರ್ಮಾಣವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿ: ಮಾರಿಕಾಂಬೆಯ ಆಶೀರ್ವಾದದಿಂದ ಗಂಗಾ ಪ್ರವಾಹೋಪಾದಿ ಜನರ ಆಗಮನವಾಗಿದೆ. ದೇಶದ ಭವಿಷ್ಯ ಬರೆಯುವ ಚುನಾವಣೆ ಇದಾಗಿದೆ. ಕಾಂಗ್ರೆಸ್ ಈ ಚುನಾವಣೆಯನ್ನು ಗ್ರಾಪಂ ಚುನಾವಣೆಗೂ ಕಡೆಯೆಂಬಂತೆ ಎದುರಿಸುತ್ತಿರುವದು ವಿಷಾದನೀಯ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹರಿಹಾಯ್ದರು.

ಭಾನುವಾರ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ವಿಕಸಿತ ಭಾರತ ಮೋದಿ ಗುರಿಯಾದರೆ ಕಾಂಗ್ರೆಸ್ ಚೊಂಬಿನ ಬಗ್ಗೆ ಮಾತನಾಡುತ್ತಿದೆ. ೧೧ ಕೋಟಿ ಶೌಚಾಲಯ ಕಟ್ಟಿದ ಮೇಲೂ ಕಾಂಗ್ರೆಸ್ ಯಾಕೆ ಚೊಂಬು ಹಿಡಿದುಕೊಂಡಿದೆ ಎಂದು ಪ್ರಶ್ನಿಸಬೇಕಿದೆ ಎಂದರು.

ದೇಶದ ರಕ್ಷಣೆಗೆ ಮೋದಿ ಬೇಕಿದೆ. ಅದೆಷ್ಟೋ ವರ್ಷಗಳಿಂದ ರಾಮಮಂದಿರ ಆಗಿರಲಿಲ್ಲ. ಮೋದಿ, ಯೋಗಿ ಪ್ರಯತ್ನದಿಂದ ಭವ್ಯ ರಾಮಂದಿರ ನಿರ್ಮಾಣವಾಗಿದೆ. ಇಲ್ಲಿನ ಸಂಸ್ಕೃತಿ, ಜ್ಞಾನದ ಸಂಪತ್ತು ವಿಶ್ವಕ್ಕೆ ಗುರುವಾಗಿ ಭಾರತ ನಿಲ್ಲುವಂತೆ ಮಾಡಿದೆ. ಮಥುರಾದ ಕೃಷ್ಣಪೂಜೆ ಮೋದಿ ಮಾಡಿದರು. ಅಯೋಧ್ಯೆಗೆ ಆಹ್ವಾನಿಸಿದರೆ ಕಾಂಗ್ರೆಸ್ ಬಹಿಷ್ಕರಿಸಿತು. ಇಲ್ಲಿ ಕೇಸರಿ ಪೇಟ ತೊಟ್ಟು ಹಿಂದುತ್ವವಾದಿಯೆನ್ನುವ ಕಾಂಗ್ರೆಸ್ ಮುಸ್ಲಿಂ ಲೀಗ್‌ನಂತೆ ವರ್ತಿಸುತ್ತಿದೆ.

ಅಲ್ಪಸಂಖ್ಯಾತರ ದುರುಪಯೋಗ ಕಾಂಗ್ರೆಸ್‌ನಿಂದ ಆಗಿದೆ. ಹಿಂದುತ್ವ ವಿರೋಧಿ ನೀತಿ ಕಾಂಗ್ರೆಸ್ ಪಾಲಿಸಿದರೆ ಅಲ್ಪಸಂಖ್ಯಾತರಂತೆ ಹಿಂದೂಗಳು ಒಮ್ಮುಖ ಮತದಾನ ಮಾಡಬೇಕಾಗುತ್ತದೆ. ಮುಸ್ಲಿಂ ಓಲೈಕೆ ಕಾಂಗ್ರೆಸ್ ನಿಲ್ಲಿಸಬೇಕು. ಜಿಲ್ಲೆಯಲ್ಲಿ ೪೦ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಅಭಿವೃದ್ಧಿ ಕಾಣದಿದ್ದರೆ ಮಾನಸಿಕ, ಕಣ್ಣು ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು.

ಮೋದಿಯವರು ನಮ್ಮ ಜತೆಯಿದ್ದಾರೆ. ಪ್ರವಾಸೋದ್ಯಮದ ಜತೆ ಕೃಷಿ, ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಅರಣ್ಯ ಭೂಮಿ ಒತ್ತುವರಿ‌ ಮಾಡಿಕೊಂಡವರ ರಕ್ಷಣೆಗೆ ಬದ್ಧ. ದರ ಹೆಚ್ಚಳವಾಗಿದೆ. ಗ್ಯಾರಂಟಿಗಳ ಅನುಷ್ಠಾನದಿಂದ ಜನಜೀವನಕ್ಕೆ ತೊಂದರೆಯಾಗಿದೆ. ಗ್ಯಾರಂಟಿಯಿಂದ ಆರ್ಥಿಕ ನಷ್ಟವಾಗಿದೆ. ಕಾಂಗ್ರೆಸ್ ಹೇಳಿದಂತೆ ನಡೆದುಕೊಳ್ಳುವುದಿಲ್ಲವೆಂಬ ಅರಿವಿದೆ.

ಅಪರಾಧಿಗಳ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಾಳಿದೆ. ಹೀಗಾಗಿ ಆ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಒಂದು ವಾರದಲ್ಲಿ ೧೫- ೨೦ ಕೊಲೆ ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮೋದಿಯವರೇ ನಿಜವಾದ ಗ್ಯಾರಂಟಿ. ಜೀವಕ್ಕೂ ಗ್ಯಾರಂಟಿಯಿರದ ಸ್ಥಿತಿ ಕಾಂಗ್ರೆಸ್ ಸರ್ಕಾರದಿಂದ ಬಂದೊದಗಿದೆ. ಓಲೈಕೆ, ಹೆಣ, ಹೆಂಡದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಧಿಕ್ಕರಿಸಲು ಕರೆ ನೀಡಿದರು.ವೋಟು ಪಡೆಯಲು ಕಾಂಗ್ರೆಸ್‌ ಗ್ಯಾರಂಟಿ ನಾಟಕ

ಶಿರಸಿ: ಮೋದಿ ಬಂದ ಮೇಲೆ ದೇಶದಲ್ಲಿ ಶಾಂತಿ ಲಭಿಸಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅಶಾಂತಿ, ಹೆಣ್ಣುಮಕ್ಕಳ ಕೊಲೆಯಾಗುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಪಾದಿಸಿದರು.

ವೋಟು ಪಡೆಯಲು ಕಾಂಗ್ರೆಸ್ ಗ್ಯಾರಂಟಿ ನಾಟಕ ಮಾಡುತ್ತಿದೆ. ದೇಶ ಮೇಲೇಳಲು ಮೋದಿಯೇ ಬರಬೇಕಾಯಿತು. ನೇಹಾ ಹತ್ಯೆ ಮಾಡಿದವರ ರಕ್ಷಣೆಗೆ ಪೊಲೀಸ್ ನೇಮಕ ಮಾಡಲಾಗಿದೆ ಎಂದು ಹರಿಹಾಯ್ದರು.

ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಗೇರಿ ಅವರನ್ನು ಆಯ್ಕೆ ಮಾಡಲು ಮನವಿ ಮಾಡಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಿಜೆಪಿಯಿಂದ ಮಾತ್ರ ಸಾಧ್ಯ. ಯುವಕರಿಗೆ ಉದ್ಯೋಗಾವಕಾಶ ನೀಡಲು ಬಿಜೆಪಿ ಬೇಕು. ಸಂಸದರು ಶ್ರಮಿಸುತ್ತಾರೆ ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ