ಮಾಜಿ ಶಾಸಕರಿಂದ ಸಂತ್ರಸ್ತ ರೈತರ ಭೇಟಿ, ಸಾಂತ್ವನ

KannadaprabhaNewsNetwork | Published : May 24, 2024 12:50 AM

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಹಲವಡೆ ಬಿದ್ದ ಭಾರೀ ಮಳೆಯಿಂದಾಗಿ ನಿಡಗಲ್‌ ಹೋಬಳಿ ವ್ಯಾಪ್ತಿಯ ಅರಸೀಕೆರೆ, ನ್ಯಾಯದಗುಂಟೆ, ಕದಿರೇಹಳ್ಳಿ, ಕೋಡಿಗೇನಹಳ್ಳಿ ಇತರೆ ಗ್ರಾಮಗಳ ಹಲವು ತೋಟಗಳಲ್ಲಿ ಅಡಿಕೆ,ತೆಂಗು, ಬಾಳೆ ಮತ್ತು ವಿಳ್ಯದೆಲೆ ನಷ್ಟಕ್ಕೀಡಾಗಿವೆ. ಅರಸೀಕೆರೆ ಗ್ರಾಮದ ರೈತ ಪ್ರಕಾಶ್‌ ರಿಗೆ ಸೇರಿದ್ದ ನೂರಾರು ಅಡಿಕೆ ಹಾಗೂ ಇನ್ನಿತರೆ ಬೆಲೆ ಬಾಳುವ ಮರಗಳು ಧರೆಗುರುಳಿವೆ.

ಕನ್ನಡಪ್ರಭ ವಾರ್ತೆ ಪಾವಗಡ

ಕಳೆದೆರಡು ದಿನಗಳ ಹಿಂದಷ್ಟೇ ಬಿದ್ದ ಭಾರೀ ಪ್ರಮಾಣದ ಮಳೆಯಿಂದಾಗಿ ಅಡಿಕೆ ಇನ್ನಿತರೆ ಬೆಲೆ ಬಾಳುವ ಬೆಳೆ ಹಾನಿಯಾಗಿರುವ ಹಿನ್ನೆಲೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಇತರೆ ಜೆಡಿಎಸ್‌ ಮುಖಂಡರು ಮಂಗಳವಾರ ತಾಲೂಕಿನ ಅರಸೀಕೆರೆ ಗ್ರಾಮಕ್ಕೆ ಭೇಟಿ ನೀಡಿ, ಬೆಳೆನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಕಳೆದ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಅರಸೀಕೆರೆ ಗ್ರಾಮದ ಪ್ರಕಾಶ್‌ ಹಾಗೂ ಇನ್ನಿತರೆ ರೈತರ ನೀರಾವರಿಯ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ ಗಿಡಗಳು ಧರೆಗುರುಳಿದ್ದವು. ತೋಟಗಾರಿಕೆ ಬೆಳೆಯಿಂದಲೇ ಜೀವನ ಸಾಗಿಸುತ್ತಿದ್ದ ಈ ಭಾಗದ ರೈತರು ತೀವ್ರ ಕಂಗಾಲಾಗಿದ್ದರು.ರೈತ ಪ್ರಕಾಶ್‌ ರಿಗೆ ಸೇರಿದ್ದ 12 ವರ್ಷದ ಫಸಲಿಗೆ ಬಂದ ಅಡಿಕೆ ಹಾಗೂ ತೆಂಗಿನ ಮರಗಳು ನೆಲಕ್ಕುರುಳಿದ ಪರಿಣಾಮ, ಸುಮಾರು 2ಲಕ್ಷ ರು. ನಷ್ಟವಾಗಿತ್ತು. ಈ ಬಗ್ಗೆ ಮೇ 21ರಂದು ಕನ್ನಡಪ್ರಭ ಹಾಗೂ ಇತರೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಎನ್‌.ಎ.ಈರಣ್ಣ ಅರಸೀಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ, ನಷ್ಟಕ್ಕೀಡಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸುದ್ದಿಗಾರರರೊಂದಿಗೆ ಮಾತನಾಡಿದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪ್ರಸಕ್ತ ಸಾಲಿನಲ್ಲಿ ತಾಲೂಕಿನ ಹಲವಡೆ ಬಿದ್ದ ಭಾರೀ ಮಳೆಯಿಂದಾಗಿ ನಿಡಗಲ್‌ ಹೋಬಳಿ ವ್ಯಾಪ್ತಿಯ ಅರಸೀಕೆರೆ, ನ್ಯಾಯದಗುಂಟೆ, ಕದಿರೇಹಳ್ಳಿ, ಕೋಡಿಗೇನಹಳ್ಳಿ ಇತರೆ ಗ್ರಾಮಗಳ ಹಲವು ತೋಟಗಳಲ್ಲಿ ಅಡಿಕೆ,ತೆಂಗು, ಬಾಳೆ ಮತ್ತು ವಿಳ್ಯದೆಲೆ ನಷ್ಟಕ್ಕೀಡಾಗಿವೆ. ಅರಸೀಕೆರೆ ಗ್ರಾಮದ ರೈತ ಪ್ರಕಾಶ್‌ ರಿಗೆ ಸೇರಿದ್ದ ನೂರಾರು ಅಡಿಕೆ ಹಾಗೂ ಇನ್ನಿತರೆ ಬೆಲೆ ಬಾಳುವ ಮರಗಳು ಧರೆಗುರುಳಿವೆ. ಈ ಘಟನೆ ಅತ್ಯಂತ ನೋವು ತರುತ್ತಿದೆ. ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ವರದಿ ಪಡೆದು ಸರ್ಕಾರದ ಗಮನ ಸೆಳೆಯುವ ಮೂಲಕ ಪ್ರಕೃತಿ ವಿಕೋಪದಿಂದ ತೋಟಗಳ ನಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಆಗ್ರಹಿಸುತ್ತೇವೆ. ಸಂಕಷ್ಟದಲ್ಲಿದ್ದ ರೈತರನ್ನು ಕಾಪಾಡುವ ಹೊಣೆ ಸರ್ಕಾರದ ಮೇಲಿದೆ ಎಂದರು.

ಬರ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗದ ಬಗ್ಗೆ ಆರೋಪಗಳಿದ್ದು, ತಾಂತ್ರಿಕ ಸಮಸ್ಯೆ ನಿವಾರಿಸುವ ಮೂಲಕ ರೈತರ ಖಾತೆಗೆ ಶೀಘ್ರ ಹಣ ಬಿಡುಗಡೆಗೊಳಿಸಲು ಸರ್ಕಾರ ಮುಂದಾಗುವ ಅಗತ್ಯವಿರುವುದಾಗಿ ಹೇಳಿದರು.

Share this article