ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು (ಕಾಪಿ ಚೀಟಿ) ನಡೆಯದಂತೆ ಕಾವಲು ಕಾಯುವಲ್ಲಿ ಪೊಲೀಸರೊಂದಿಗೆ ರೋಣ ತಾಲೂಕಿನ ಮಾಜಿ ಸೈನಿಕರು ಸಾಥ್ ನೀಡಿದ್ದು, ಈ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ರೋಣ ತಾಲೂಕಿನ ಮಾಜಿ ಸೈನಿಕರ ಸಂಘವು ಸದಾ ಒಂದಿಲ್ಲೊಂದು ರಚನಾತ್ಮಕ, ಕ್ರಿಯಾಶೀಲ, ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದು, ಅದರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಭಯಮುಕ್ತರಾಗಿ ಬರೆಯಬೇಕು, ನಕಲು ನಡೆಯದಂತೆ ಪರೀಕ್ಷಾ ಕೇಂದ್ರದ ಸುತ್ತಲೂ ಕಾವಲು ಕಾಯಬೇಕು ಎಂಬ ಸಂಕಲ್ಪದಿಂದ ರೋಣ ತಾಲೂಕಿನ ಮಾಜಿ ಸೈನಿಕರ ಸಂಘವು ಹತ್ತಕ್ಕೂ ಹೆಚ್ಚು ಜನರ (ಮಾಜಿ ಸೈನಿಕರು) ತಂಡ ಕಟ್ಟಿಕೊಂಡು ತಾಲೂಕಿನ ಹೊಳೆಆಲೂರು ಎಸ್.ಕೆ.ವಿ. ಪದವಿಪೂರ್ವ ಕಾಲೇಜ್ ಪರೀಕ್ಷಾ ಕೇಂದ್ರ ಮತ್ತು ಯಚ್ಚರೇಶ್ವರ ಪ್ರೌಢಶಾಲೆ ಪರೀಕ್ಷಾ ಕೇಂದ್ರ, ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರೊಂದಿಗೆ ನಿರ್ಬಂಧಿತ ಪ್ರದೇಶದಲ್ಲಿ ಯಾರೊಬ್ಬರು ಸುಳಿಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.ಸ್ವಪ್ರೇರಣೆಯಿಂದ ಸೇವೆ: ಪರೀಕ್ಷೆ ನಡೆಯುವ ನಿಗದಿ ಸಮಯಕ್ಕಿಂತ 2 ತಾಸು ಮೊದಲು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ, ಸಂಸ್ಥೆಯ ಆಡಳಿತ ಮಂಡಳಿಗೆ, ಕರ್ತವ್ಯನಿರತ ಪೊಲೀಸರಿಗೆ ಮಾಹಿತಿ ನೀಡಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಹೇಳುವುದರೊಂದಿಗೆ, ಭಯಮುಕ್ತರಾಗಿ ಪರೀಕ್ಷೆ ಬರೆಯಿರಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬುತ್ತಾರೆ. ನಕಲು ಚೀಟಿ ಕೊಂಡೊಯ್ಯದಂತೆ ತಪಾಸಣೆಯನ್ನು ಮಾಡುತ್ತಾರೆ. ರೋಣ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಪರೀಕ್ಷಾ ಕೇಂದ್ರಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಗಿ ಬರುತ್ತಾರೆ.
ಕೇಂದ್ರದ ಸುತ್ತಲೂ ಬಿಗಿ ಬಂದೋಬಸ್ತ್:ತಾಲೂಕಿನ ಬೆಳವಣಕಿ ವೀರಭದ್ರೇಶ್ವರ ಸಂಯುಕ್ತ ಪಿ.ಯು. ಕಾಲೇಜ್ ಪರೀಕ್ಷಾ ಕೇಂದ್ರದ ಸುತ್ತ ನಕಲು ತಡೆಗೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರಭುಗೌಡ ಜಿ. ಪಾಟೀಲ ನೇತೃತ್ವದಲ್ಲಿ ಮಾಜಿ ಸೈನಿಕರಾದ ಆರ್. ವಿ. ದಾನಪ್ಪಗೌಡ್ರ, ವಿರೂಪಾಕ್ಷಪ್ಪ ಬಡಿಗೇರ, ಶಶಿಧರ ವಕ್ಕರ, ಚೆನ್ನಪ್ಪ ಭಾವಿ, ಅರ್ಜುನ್ ಅರುಹುಣಸಿ, ಕಳಕಪ್ಪ ಗಾರವಾಡ, ನಿಂಗಪ್ಪ ಚೋರಗಸ್ತಿ, ನಟರಾಜ ಹೊಸಂಗಡಿ , ವೆಂಕಪ್ಪ ಕಲಹಾಳ, ಸಿದ್ದಲಿಂಗೇಶ್ವರ ಪಾಳ್ಯದ, ಬಸವರಾಜ, ನಾಗಪ್ಪ ಹೂಗಾರ ಶ್ರಮಿಸಿದರು. ಮಾಜಿ ಸೈನಿಕರ ಈ ಕಾರ್ಯಕ್ಕೆ ತಾಲೂಕಿನ ಜನತೆ, ಪೊಲೀಸರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹೊಳೆಆಲೂರ ಕೇಂದ್ರದಲ್ಲಿ ಕರ್ತವ್ಯ: ತಾಲೂಕಿನ ಹೊಳೆಆಲೂರು ಎಸ್.ಕೆ.ವಿ. ಪದವಿಪೂರ್ವ ಕಾಲೇಜ್ ಪರೀಕ್ಷಾ ಕೇಂದ್ರ ಮತ್ತು ಯಚ್ಚರೇಶ್ವರ ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರೊಂದಿಗೆ ಮಾಜಿ ಸೈನಿಕರಾದ ಸುರೇಶ ಗಾಣಿಗೇರ, ಮುತ್ತಣ್ಣ ಗಡಾಮ, ಮಲ್ಲಿಕಾರ್ಜುನ ಅಂಗಡಕಿ, ವಿರೂಪಾಕ್ಷಪ್ಪ ಹಡಪದ, ಹನಮಂತಪ್ಪ ಮಾದರ, ಶರಣಪ್ಪ ಕವಾಸ್ತ, ಪ್ರಕಾಶ ರಾಮಣ್ಣವರ, ಅಂತೋಷ ಹೊಸಮನಿ, ವೀರಣ್ಣ ಮಲಕಾಜಪ್ಪನವರ, ಚನ್ನಯ್ಯ ಸೇರಿದಂತೆ ಅನೇಕರ ತಂಡ ಕಾವಲು ಕಾಯುತ್ತಿದ್ದಾರೆ.
ಮಾಜಿ ಸೈನಿಕರ ಶಿಸ್ತುಬದ್ದ ಸೇವೆಗೆ ತಾಲೂಕಿನ ಜನತೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ವಿದ್ಯಾರ್ಥಿಗಳು ಹ್ಯಾಟ್ಸಪ್ ಹೇಳುತ್ತಿದ್ದಾರೆ.ಬೆಳವಣಕಿ ವೀರಭದ್ರೇಶ್ವರ ವಿದ್ಯಾವರ್ಧಕ ಸಮಿತಿ ಚೇರಮನ್ ಎ.ಸಿ. ಹಕ್ಕಪಕ್ಕಿ ಅವರು ವೀರಭದ್ರೇಶ್ವರ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಕ್ಕೆ ಭದ್ರತೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ತಂಡ ರಚಿಸಿಕೊಂಡು ಪರೀಕ್ಷೆ ಕೇಂದ್ರದ ಸುತ್ತಲೂ ಭದ್ರತೆ ಒದಗಿಸಿದೆವು. ಈ ಸೇವೆ ನಮಗೆ ಅತ್ಯಂತ ಖುಷಿ ತಂದಿದೆ. ಬೆಳವಣಕಿ, ಹೊಳೆಆಲೂರ, ಇಟಗಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದೇವೆ. ದೇಶ ಸೇವೆ ಜತೆಗೆ ಸಮಾಜಮುಖಿ ಸೇವಾ ಕಾರ್ಯ ಮತ್ತು ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿಯೂ ನಾವು ಸೇವೆ ಸಲ್ಲಿಸಲು ಸದಾ ಕಂಕಣಬದ್ಧರಾಗಿದ್ದೇವೆ ಎಂದು ರೋಣ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರಭುಗೌಡ ಜಿ. ಪಾಟೀಲ ಹೇಳುತ್ತಾರೆ.
ಪರೀಕ್ಷಾ ಕೇಂದ್ರದ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಕಲು ತಡೆಗೆ ನಮ್ಮ ಸಿಬ್ಬಂದಿಯೊಂದಿಗೆ ಮಾಜಿ ಸೈನಿಕರು ಸೇವೆ ಸಲ್ಲಿಸಿದ್ದು ಶ್ಲಾಘನೀಯವಾಗಿದೆ ಎಂದು ರೋಣ ಪಿಎಸ್‌ಐ ಪ್ರಕಾಶ ಬಣಕಾರ ಹೇಳುತ್ತಾರೆ.ಬೆಳವಣಕಿ ಹಾಗೂ ಹೊಳೆಆಲೂರಿನಲ್ಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ ಸುತ್ತಲೂ ಹತ್ತಾರು ಮಾಜಿ ಸೈನಿಕರು ಉರಿ ಬಿಸಿಲು ಲೆಕ್ಕಿಸದೆ ಭದ್ರತೆ ಒದಗಿಸಿದ್ದು, ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಅಭಿನಂದಿಸುತ್ತದೆ ಎಂದು ರೋಣ ಬಿಇಒ ರುದ್ರಪ್ಪ ಹುರುಳಿ ಹೇಳಿದರು.