ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಕನ್ನಡ ಪಬ್ಲಿಕ್ ಶಾಲೆ, ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪ.ಪೂ. ಕಾಲೇಜು, ಸರ್ಕಾರಿ ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗ, ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಬಾಪೂಜಿ ಸಂಯುಕ್ತ ಪ.ಪೂ. ಕಾಲೇಜು, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಸೇರಿದಂತೆ 16 ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್‌ಸಿ ಪರೀಕ್ಷೆ ಸುಗಮವಾಗಿ ನಡೆಯಿತು.
ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಬಂದ ಅಭ್ಯರ್ಥಿಗಳನ್ನು ಕೂಲಂಕೂಷವಾಗಿ ತಪಾಸಣೆ ನಡೆಸಿದ ಅಧಿಕಾರಿಗಳು, ಶೂ, ಕೈಯಲ್ಲಿ ದಾರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗದಂತೆ ಕ್ರಮ ವಹಿಸಿದ್ದರು.ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಕಲಂ 163ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ನಿಷೇಧಿತ ಪ್ರದೇಶದಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಿತ್ತು.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಇತರೆ ಗೌಪ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಒಟ್ಟು 5 ಮಾರ್ಗಗಳ ಮಾರ್ಗಾಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಎಲ್ಲ ಮಾರ್ಗಗಳಿಗೂ ತಹಸೀಲ್ದಾರ್‌ಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು.
ಈಗಾಗಲೇ ಎಲ್ಲಾ 16 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಪರೀಕ್ಷೆಯನ್ನು ಸುಗಮವಾಗಿ ಹಾಗೂ ಯಾವುದೇ ಲೋಪದೋಷಗಳು ಇಲ್ಲದಂತೆ ನಡೆಸಲು ತರಬೇತಿಯನ್ನು ನೀಡಲಾಗಿದ್ದು, ನಗರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯಲು ರಾಜ್ಯದ ಇತರೆ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನದಂದು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳು ಇರುವ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ ನಗರ ಸಾರಿಗೆಗಳು 3 ರಿಂದ 4 ಮಾರ್ಗಗಳಲ್ಲಿ ಸಂಚರಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.