ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಿವಮೊಗ್ಗ ಜಿಲ್ಲೆಯ 3 ತಾಲೂಕುಗಳಿಂದ 35 ಪರೀಕ್ಷಾ ಕೇಂದ್ರಗಳಲ್ಲಿ ಅ.28 ಮತ್ತು 29ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಅಗತ್ಯ ಮುಂಗಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ನಗರದ ಜಿಲ್ಲಾಧಿಕಾರಿ ಹಳೇ ಕಚೇರಿ ಸಭಾಂಗಣದಲ್ಲಿ ಬುಧವಾರ ಸ್ಪರ್ಧಾತ್ಮಕ ಪರೀಕ್ಷೆಗೆ ನಿಯೋಜಿತರಾಗಿದ್ದ ಅಧಿಕಾರಿ-ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗಾಗಿ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಅಧಿಕಾರಿ-ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅ.28 ಮತ್ತು 29ರಂದು ರಾಜ್ಯಾದ್ಯಂತ ಪರೀಕ್ಷೆಗಳನ್ನು ನಡೆಸಿ, ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದರು. ಅ.28ರಂದು ನಗರದ 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗ್ಗೆ 10.30ರಿಂದ ನಡೆಯುವ ಅಧಿವೇಶನದಲ್ಲಿ 6945 ಪರೀಕ್ಷಾರ್ಥಿಗಳು ಹಾಗೂ ಮಧ್ಯಾಹ್ನ 2.30ರಿಂದ ನಡೆಯುವ 2ನೇ ಅಧಿವೇಶನದಲ್ಲಿ 7,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅ.29ರಂದು ಶಿವಮೊಗ್ಗದ 24, ಭದ್ರಾವತಿ-6, ಸಾಗರ-2 ಮತ್ತು ಶಿಕಾರಿಪುರ-3 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದು, ಅಂದು ಮೊದಲ ಅಧಿವೇಶನದಲ್ಲಿ 12,616 ಪರೀಕ್ಷಾರ್ಥಿಗಳು ಹಾಗೂ ಮಧ್ಯಾಹ್ನದ 2ನೇ ಅಧಿವೇಶನದಲ್ಲಿ 12,534 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು. ಕೇಂದ್ರ ಸುತ್ತ 144 ಸೆಕ್ಷನ್: ಪರೀಕ್ಷೆ ನಡೆಯುವ ಪ್ರತಿ ಕೇಂದ್ರಕ್ಕೆ ವೀಕ್ಷಕರಾಗಿ ಎ ಶ್ರೇಣಿ ಅಧಿಕಾರಿಯನ್ನು, ಪ್ರಶ್ನೆಪತ್ರಿಕಾ ಪಾಲಕರನ್ನಾಗಿ ಓರ್ವ ಪ್ರಾಂಶುಪಾಲರನ್ನು ಹಾಗೂ ಓರ್ವ ಉಪನ್ಯಾಸಕರನ್ನು ಜಾಗೃತದಳ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಲ್ಲದೇ, ಎಲ್ಲ ಪರೀಕ್ಷಾ ಕೇಂದ್ರಗಳ ಸೂಕ್ತ ನಿರ್ವಹಣೆಗಾಗಿ 10 ತ್ರಿಸದಸ್ಯ ಸಮಿತಿಗಳನ್ನು ರಚಿಸಿ ಹೊಣೆಗಾರಿಕೆ ನೀಡಲಾಗಿದೆ. ಪರೀಕ್ಷೆ ನಡೆಯುವ ದಿನದಂದು ವಿದ್ಯುತ್ ಅಡಚಣೆ ಆಗದಂತೆ ಗಮನಿಸಲಾಗುವುದು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ಪ್ರದೇಶದ ವ್ಯಾಪ್ತಿಯಲ್ಲಿ ಸೆ.144 ಸೆಕ್ಷನ್ ಜಾರಿಗೊಳಿಸಿ, ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಕೇಂದ್ರದ ಮೇಲ್ವಿಚಾರಕರು, ವಿದ್ಯುತ್, ಶುದ್ಧಗಾಳಿ- ಬೆಳಕು, ಕುಡಿಯುವ ನೀರು, ಶೌಚಾಲಯ, ಪ್ರತಿ ಕೊಠಡಿಗೆ ಗೋಡೆ ಗಡಿಯಾರ ಸೌಲಭ್ಯ ಹಾಗೂ ಕಣ್ಗಾವಲಿಗಾಗಿ ಕ್ಯಾಮರಾಗಳನ್ನು ಅಳವಡಿಸಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರದೇ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಖಜಾನಾಧಿಕಾರಿ ಎಚ್.ಎಸ್.ಸಾವಿತ್ರಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ನಿಯೋಜಿತ ಅಧಿಕಾರಿ- ಸಿಬ್ಬಂದಿ ಉಪಸ್ಥಿತರಿದ್ದರು. - - - ಬಾಕ್ಸ್ ನಿಯಮಗಳು- ನಿಷೇಧಗಳೇನು? - ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿಪಡಿಸಿದ ಅವಧಿಗೂ 1 ಗಂಟೆ ಮುನ್ನ ಪರೀಕ್ಷಾ ಕೇಂದ್ರದಲ್ಲಿದ್ದು, ನಿಯಮಾನುಸಾರ ಪ್ರವೇಶ ಪಡೆಯಬೇಕು - ಹಿಜಾಬ್ ಧರಿಸಿದ ಪರೀಕ್ಷಾರ್ಥಿಗಳು ಸಕಾಲದಲ್ಲಿ ಹಾಜರಿದ್ದು, ತಪಾಸಣೆಗೆ ಒಳಗಾಗಬೇಕು. ಅದಕ್ಕಾಗಿ ಪ್ರತ್ಯೇಕ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು - ನಿಗದಿತ ಅವಧಿ ನಂತರ ಆಗಮಿಸುವ ಪರೀಕ್ಷಾರ್ಥಿಗಳಿಗೆ ಕೇಂದ್ರದ ಪ್ರವೇಶ ನಿರ್ಬಂಧಿಸಲಾಗಿದೆ - ಪರೀಕ್ಷೆಗೆ ಆಗಮಿಸುವ ಪ್ರತಿ ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಯುಲೇಟರ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳು ಕೇಂದ್ರದೊಳಕ್ಕೆ ತರುವಂತಿಲ್ಲ - ಪೂರ್ಣ ತೋಳಿನ ಷರ್ಟ್ ಧರಿಸುವುದು, ಶೂ, ಆಭರಣಗಳು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ - ಪರೀಕ್ಷಾರ್ಥಿಗಳು ಪರೀಕ್ಷಾ ಪ್ರಾಧಿಕಾರದ ಈ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು - ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾರ್ಥಿಗಳಲ್ಲದೆ ಇತರೆ ವ್ಯಕ್ತಿಗಳು ಪ್ರವೇಶಿಸುವುದನ್ನು, ಗುಂಪುಗೂಡುವುದು ನಿಷೇಧ - - - -25ಎಸ್‌ಎಂಜಿಕೆಪಿ01: ಶಿವಮೊಗ್ಗದ ಜಿಲ್ಲಾಧಿಕಾರಿ ಹಳೇ ಕಚೇರಿ ಸಭಾಂಗಣದಲ್ಲಿ ಬುಧವಾರ ಸ್ಪರ್ಧಾತ್ಮಕ ಪರೀಕ್ಷೆಗೆ ನಿಯೋಜಿತರಾಗಿದ್ದ ಅಧಿಕಾರಿ-ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗಾಗಿ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿದರು.