ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ನಾಳೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಪರೀಕ್ಷೆ

KannadaprabhaNewsNetwork |  
Published : Sep 28, 2024, 01:21 AM IST
27ಕೆಎಂಎನ್ ಡಿ11 | Kannada Prabha

ಸಾರಾಂಶ

ಅಭ್ಯರ್ಥಿಗಳು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲ್ಯೂ ಟೂತ್, ಕ್ಯಾಲ್ಕುಲೇಟರ್, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋ ಫೋನ್ ಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಸೆ.29 ರಂದು ಇದೇ ಮೊದಲ ಬಾರಿಗೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತಹಸೀಲ್ದಾರರು, ಕಾಲೇಜು ಪ್ರಾಂಶುಪಾಲರು ಹಾಗೂ ಪರೀಕ್ಷಾ ಪರಿವೀಕ್ಷಕರ ಸಭೆ ನಡೆಸಿ ಮಾತನಾಡಿ, ಸೆ.29ರಂದು ನಡೆಯಲಿರುವ ಗ್ರಾಮ ಆಡಳಿತಾಕಾರಿ ಹುದ್ದೆ ಪರೀಕ್ಷೆಯಲ್ಲಿ 12,086 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಮಂಡ್ಯ -14, ಮದ್ದೂರು-3, ಮಳವಳ್ಳಿ 2, ನಾಗಮಂಗಲ-2, ಪಾಂಡವಪುರ-2, ಕೃಷ್ಣರಾಜಪೇಟೆ-2, ಶ್ರೀರಂಗಪಟ್ಟಣ-1 ರಂತೆ ಒಟ್ಟು 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತಡವಾಗಿ ಬಂದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸುವಂತಿಲ್ಲ ಹಾಗೂ ಪರೀಕ್ಷೆ ನಡೆಯುವಾಗ ಅರ್ಧಕ್ಕೆ ಅಭ್ಯರ್ಥಿಗಳನ್ನು ಕೊಠಡಿಯಿಂದ ಹೊರಗೆ ಕಳುಹಿಸುವಂತಿಲ್ಲ ಎಂದು ಸೂಚಿಸಿದರು.

ಪರೀಕ್ಷಾ ಪರಿವೀಕ್ಷಕರು ಎಚ್ಚರಿಕೆಯಿಂದ ಪ್ರಶ್ನೆಪತ್ರಿಕೆಯನ್ನು ನೋಡಿಕೊಳ್ಳಬೇಕು, ಪರೀಕ್ಷೆ ಪ್ರಾರಂಭವಾಗುವುದಕ್ಕೂ ಒಂದು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಕ್ರಮವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ತೆರೆದಿಯೇ ಎಂದು ನೋಡಿಕೊಳ್ಳಬೇಕು, ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಎಚ್ಚರಿಸಿದರು.

ತ್ರಿಸದಸ್ಯ ಸಮಿತಿಯ ಸದಸ್ಯರು ನಿಗದಿತ ಸಮಯದಲ್ಲಿ ಖಜಾನೆಗೆ ಹಾಜರಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಯ ಗೌಪ್ಯತಾ ಬಂಡಲ್‌ಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ವಿತರಿಸುವಂತೆ ತಿಳಿಸಲಾಯಿತು.

ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸುವ ಸಲುವಾಗಿ ಸದರಿ ಪರೀಕ್ಷೆ ನಡೆಯುವ ದಿನಾಂಕಗಳನ್ನು ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಎ ಗುಂಪಿನ ಅಧಿಕಾರಿಗಳನ್ನು ವೀಕ್ಷಕರನ್ನಾಗಿ (ಸಪಪೂ ಕಾಲೇಜುಗಳ ಪ್ರಾಂಶುಪಾಲರನ್ನು, ಒಟ್ಟು 26 ವೀಕ್ಷಕರನ್ನು) ನಿಯೋಜಿಸಲಾಗಿದೆ. ನೇಮಕಗೊಂಡ ವೀಕ್ಷಕರ ಪಟ್ಟಿಯನ್ನು ಪ್ರಾಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ಸುತ್ತಳತೆಯಲ್ಲಿ ಐಪಿಸಿ ಸೆಕ್ಷನ್ 144ನೇ ಕಲಂ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲ್ಯೂ ಟೂತ್, ಕ್ಯಾಲ್ಕುಲೇಟರ್, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋ ಫೋನ್ ಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಅಭ್ಯರ್ಥಿಗಳು ತಲೆ ಮೇಲೆ ಫುಲ್ ಶರ್ಟ್, ಶೂ, ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸುವುದು, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರವನ್ನು/ಸಾಧನವನ್ನು ಧರಿಸುವುದನ್ನು ನಿಷೇಧಿಸಿದೆ, ಯಾವುದೇ ಮಾಸ್ಕನ್ನು ಧರಿಸಿದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಕೆಇಎರವರು ನೀಡಿರುವ ಸೂಚನೆಯಾನುಸಾರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಜೀನ್ಸ್ ಪ್ಯಾಂಟ್ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಒಳಗೆ ಪ್ರವೇಶಿಸಲು ಅನುಮತಿಸಬಾರದು. ಅದೇ ರೀತಿ ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ ಸರ ಹಾಗೂ ಮೂಗುತಿಯನ್ನು ಹೊರತುಪಡಿಸಿ ಇನ್ನಾವುದೇ ಆಭರಣಗಳನ್ನು ಧರಿಸಿದಂತೆ ಪರೀಕ್ಷಾ ಕೇಂದ್ರಗಳ ಉಪಮುಖ್ಯ ಅಧೀಕ್ಷಕರಿಗೆ ತಾಕೀತು ಮಾಡಿದರು.

ಪರೀಕ್ಷಾ ಮೇಲ್ವಿಚಾರಕರು ರೀಕ್ಷಾ ನಿಯಮಗಳನ್ನು ಪಾಲಿಸುವುದು. ಅಭ್ಯರ್ಥಿಯು ಒಎಂಆರ್ ನಲ್ಲಿ ನೋಂದಣಿ ಸಂಖ್ಯೆ ಮತ್ತು ವರ್ಷವನ್ನು ಸರಿಯಾಗಿ ಬರೆದು ಶೇಡ್ ಮಾಡಿ ಸಹಿ ಮಾಡಿರುವುದನ್ನು ಖಾತರಿಪಡಿಸಿಕೊಂಡು ಒಎಂಆರ್‌ನಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ಅಭ್ಯರ್ಥಿಯು ಸಹಿ ಮಾಡುವಂತೆ ಕ್ರಮ ವಹಿಸಲು ತಿಳಿಸಿದರು.

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚೆಲುವಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ