ದಾವಣಗೆರೆಯಲ್ಲಿ ಶುಲ್ಕಕ್ಕೆ ಸಮಸ್ಯೆ ಹಿನ್ನೆಲೆ ಆ.11ರ ವರೆಗೆ ಪರೀಕ್ಷೆ ಮುಂದಕ್ಕೆ

KannadaprabhaNewsNetwork |  
Published : Jul 31, 2025, 12:45 AM IST
30ಕೆಡಿವಿಜಿ1, 2-ದಾವಣಗೆರೆ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಅಹವಾಲು ಆಲಿಸಿ ಮಾತನಾಡಿದ ಕುಲಪತಿ ಪ್ರೊ.ಬಿ.ಡಿ.ಕುಂಬಾರ. | Kannada Prabha

ಸಾರಾಂಶ

ಪರಿಶಿಷ್ಟ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನ ಬಾರದ ಹಿನ್ನೆಲೆಯಲ್ಲಿ ಕಾಲೇಜು ಶುಲ್ಕ ಪಾವತಿಸಲು ಸಮಸ್ಯೆಯಾದ ಬಗ್ಗೆ ವಿದ್ಯಾರ್ಥಿ ಮುಖಂಡ ತಾಹೀರ್ ಸಮೀರ್ ನೇತೃತ್ವದ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ದಾವಣಗೆರೆ ವಿಶ್ವವಿದ್ಯಾಲಯ ಎಂಎಸ್‌ಸಿ ಪರೀಕ್ಷೆಯನ್ನು ಆ.11ರ ವರೆಗೆ ಮುಂದೂಡಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನ ಬಾರದ ಹಿನ್ನೆಲೆಯಲ್ಲಿ ಕಾಲೇಜು ಶುಲ್ಕ ಪಾವತಿಸಲು ಸಮಸ್ಯೆಯಾದ ಬಗ್ಗೆ ವಿದ್ಯಾರ್ಥಿ ಮುಖಂಡ ತಾಹೀರ್ ಸಮೀರ್ ನೇತೃತ್ವದ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ದಾವಣಗೆರೆ ವಿಶ್ವವಿದ್ಯಾಲಯ ಎಂಎಸ್‌ಸಿ ಪರೀಕ್ಷೆಯನ್ನು ಆ.11ರ ವರೆಗೆ ಮುಂದೂಡಿದೆ.

ತಾಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿವಿ ಆವರಣದಲ್ಲಿ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರನ್ನು ವಿದ್ಯಾರ್ಥಿ ಮುಖಂಡ ತಾಹೀರ್ ಸಮೀರ್ ನೇತೃತ್ವದಲ್ಲಿ ಭೇಟಿ ಮಾಡಿದ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸರ್ಕಾರದಿಂದ ಬರಬೇಕಾದ ವಿದ್ಯಾರ್ಥಿವೇತನ ಬರದ ಹಿನ್ನೆಲೆ ಆಗಿರುವ ತೊಂದರೆ ಬಗ್ಗೆ ವಿಶ್ವವಿದ್ಯಾಲಯದ ಗಮನಕ್ಕೆ ತಂದರು.

ಇದೇ ವೇಳೆ ಮಾತನಾಡಿದ ತಾಹೀರ್ ಸಮೀರ್, ದಾವಿವಿಯಲ್ಲಿ ಎಂಎಸ್‌ಸಿ ಕೋರ್ಸ್ ಅಧ್ಯಯನ ಮಾಡುತ್ತಿರುವ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಬರಬೇಕಾದಿದ್ದ ವಿದ್ಯಾರ್ಥಿ ವೇತನ ಈವರೆಗೂ ಬಂಜಿಲ್ಲ. ಹಾಗಾಗಿ ಕಾಲೇಜು ಶುಲ್ಕ ಪಾವತಿಸಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಹಿನ್ನೆಲೆಯಲ್ಲಿ ಒಂದಿಷ್ಟು ದಿನಗಳ ಕಾಲಾವಕಾಶ ಮಾಡಿಕೊಡಬೇಕು ಎಂದು ದಾವಿವಿ ಕುಲಪತಿಗೆ ಮನವಿ ಮಾಡಿದರು.

ಬಡವರು, ಕಡು ಬಡವರು, ರೈತಾಪಿ ವರ್ಗ, ಗ್ರಾಮೀಣ ಹಿನ್ನೆಲೆ, ಶ್ರಮಿಕ ವರ್ಗದ ಪರಿಶಿಷ್ಟರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಭರಿಸುವುದು ಕಷ್ಟವಾಗುತ್ತಿದೆ. ಕುಟುಂಬದ ಆರ್ಥಿಕ ಸ್ಥಿತಿ ಸರಿಯಾಗಿಲ್ಲದಿರುವುದು, ಬಡತನ ಹಾಗೂ ಸರ್ಕಾರದಿಂದ ವಿದ್ಯಾರ್ಥಿವೇತನ ವಿಳಂಬವಾಗಿರುವ ಕಾರಣಕ್ಕೆ ಸಮಸ್ಯೆ ಉಲ್ಭಣಿಸುತ್ತಿದೆ. ಮಾನವೀಯ ದೃಷ್ಟಿಯಿಂದ ದಾವಿವಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಅಹವಾಲು ಆಲಿಸಿದ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ತಮಗೂ ಅರಿವಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆ.5ರಂದು ನಡೆಯಬೇಕಾಗಿದ್ದ ಎಂಎಸ್‌ಸಿ ಪರೀಕ್ಷೆಯನ್ನು ಆ.11ರವರೆಗೆ ಮುಂದೂಡಲು ತಾತ್ಕಾಲಿಕವಾಗಿ ನಿರ್ಧಾರ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳ ಶಿಕ್ಷಣದ ಹಕ್ಕುಗಳಿಗೆ ಹಾನಿಯಾಗದಂತೆ, ನಿಮಗೆ ಅಗತ್ಯ ಸಹಕಾರ ನೀಡಲು ದಾವಣಗೆರೆ ‍ವಿಶ್ವ ವಿದ್ಯಾನಿಲಯ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ದಾವಿವಿ ಕುಲ ಸಚಿವರು, ಪ್ರಾಧ್ಯಾಪಕರು, ವಿವಿಧ ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌