ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ವಡೆಯರಹತ್ತೂರು ಗ್ರಾಮದಲ್ಲಿ ತಮ್ಮ ಶ್ರೀಮಠಕ್ಕೆ ಸೇರಿದ ಜಮೀನಿನಲ್ಲಿ ಮಂಗಳವಾರ ಮೆಕ್ಕೆಜೋಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ಡ್ರೋನ್ ಮೂಲಕ ಸಿಂಪಡಣೆ ಕಾರ್ಯ ವೀಕ್ಷಿಸಿ ಮಾತನಾಡಿದರು.
ಈಗಾಗಲೇ ಹರಳು ರೂಪದ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಕೆ ತಂತ್ರಜ್ಞಾನ ಅಭಿವೃದ್ದಿಪಡಿಸಿದೆ. ಈ ಬಗ್ಗೆ ರೈತರು ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು ಎಂದರು.ಕೃಷಿ ಇಲಾಖೆ ಉಪ ನಿರ್ದೇಶಕ ರೇವಣಸಿದ್ದನಗೌಡ ಎಚ್.ಕೆ. ಮಾತನಾಡಿ, ಬೆಳೆಗಳಿಗೆ ಹರಳು ರೂಪದ ಯೂರಿಯಾ ರಸಗೊಬ್ಬರ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಸಿಂಪರಣೆ ಮಾಡಲು ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಬಿ.ಎನ್.ವಿಶ್ವನಾಥ ಮಾತನಾಡಿ, ಈ ಬಾರಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚು ಪ್ರಮಾಣದಲ್ಲಿ ಆಗಿದೆ. ಕೃಷಿ ಚಟುವಟಿಕೆಗಳಾದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೊಂದರೆ ಉಂಟಾಗಿದೆ, ಯೂರಿಯಾ ರಸಗೊಬ್ಬರವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾಧ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳೆವಣಿಗೆ ಕುಂಠಿತವಾಗಿ ಗಿಡಗಳ ಬೆಳೆವಣಿಗೆಯೂ ಸಹ ಕುಂಠಿತವಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂದರು.
ಆದ್ದರಿಂದ ರೈತರು ಯೂರಿಯಾ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20 ಸಾರಜನಕ) –ಅಥವಾ ನ್ಯಾನೋ ಡಿ. ಎ. ಪಿ. (ಶೇ.8 ಸಾರಜನಕ ಮತ್ತು ಶೇ. 16 ರಂಜಕ) ದ್ರವ ರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ 3ರಿಂದ 5 ಮಿಲಿ ಬೆರೆಸಿ ಸಿಂಪಡಿಸಲು ಕೋರಿದೆ. ಈ ದ್ರವ ಗೊಬ್ಬರವನ್ನು 30-35 ದಿನ ಮೊದಲನೇ ಹಂತ ಮತ್ತು 50-60 ದಿನಗಳಲ್ಲಿ ಸಿಂಪಡಿಸುವುದರಿಂದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳೆವಣಿಗೆ ಮತ್ತು ಉತ್ತಮ ಇಳುವರಿ ಸಾಧ್ಯವಾಗುತ್ತದೆ ಎಂದರು.ಕೃಷಿ ಅಧಿಕಾರಿ ಅತೀಕ್ ಉಲ್ಲಾ, ಕೋರಮಂಡಲ್ ಇಂಟರ್‌ನ್ಯಾಷನಲ್ ಪ್ರೈ.ಲಿ. (ಗ್ರೋಮೋರ್) ಕಂಪನಿಯ ಅಧಿಕಾರಿ ಸತೀಶ್ ಡ್ರೋನ್ ಮೂಲಕ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಸಿಂಪಡಣೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನಡೆಸಿದರು.
ಕೃಷಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ , ಕೋರಮಂಡಲ್ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮತ್ತು ವಡೆಯರಹತ್ತೂರು ಗ್ರಾಮದ ರೈತರು ಹಾಜರಿದ್ದರು.