ಇಂದಿನಿಂದ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ

KannadaprabhaNewsNetwork |  
Published : Jan 16, 2026, 01:00 AM IST
ಉತ್ಖನನ ಪ್ರಾರಂಭವಾಗುವ ಸ್ಥಳವನ್ನು ಗುರುವಾರ ತೆರವು ಕಾರ್ಯ ಪ್ರಾರಂಭಿಸಿರುವುದು. | Kannada Prabha

ಸಾರಾಂಶ

ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಆರಂಭಗೊಳ್ಳಲಿರುವ ಉತ್ಖನನ ಕಾರ್ಯವು ಅಧಿಕಾರಿಗಳು ಹಾಗೂ ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ.

ಶಿವಕುಮಾರ ಕುಷ್ಟಗಿ

ಗದಗ: ತಾಲೂಕಿನ ಇತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಜ. 10ರಂದು ಅಪರೂಪದ ಚಿನ್ನದ ಆಭರಣ (ನಿಧಿ) ಪತ್ತೆಯಾದ ನಂತರ ಉತ್ಖನನದ ಕೂಗಿಗೆ ಸರ್ಕಾರ ಸ್ಪಂದಿಸಿದ್ದು, ಜ. 16ರಿಂದ ಉತ್ಖನನ ಪ್ರಾರಂಭವಾಗಲಿದೆ.

ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಆರಂಭಗೊಳ್ಳಲಿರುವ ಉತ್ಖನನ ಕಾರ್ಯವು ಅಧಿಕಾರಿಗಳು ಹಾಗೂ ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ.

ಹಿನ್ನೆಲೆ: 2025ರ ಜೂ. 3ರಂದು ಸಿಎಂ ಸಿದ್ದರಾಮಯ್ಯ ಅವರು ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮತ್ತು ಸಿದ್ದರ ಭಾವಿ ಮಧ್ಯದಲ್ಲಿರುವ ಜಾಗದಲ್ಲಿ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆದರೆ, ಉತ್ಖನನ ಸ್ಥಳದ ಪಕ್ಕದಲ್ಲಿನ ಜನತಾ ವಿದ್ಯಾವರ್ಧಕ ಸಂಸ್ಥೆ ಮಾಲೀಕತ್ವದ ಸರ್ವೇ ನಂ. 905/ಬಿ ಗ್ರಾಮ ಠಾಣಾ ಅಸ್ತಿಯ 5388 ಚ. ಜಾಗವನ್ನು (ಕಟ್ಟಡ ಸಮೇತ) ಉತ್ಖನನ ದೃಷ್ಟಿಯಿಂದ ಸ್ವಾಧೀನ ಪಡಿಸಿಕೊಳ್ಳಬೇಕಿತ್ತು.

ಕಳೆದ 6 ತಿಂಗಳಿಂದ ಈ ಪ್ರಕ್ರಿಯೆ ಜಾರಿಯಲ್ಲಿತ್ತು. ಈ ವಿಷಯ ಸಚಿವ ಸಂಪುಟದಲ್ಲಿ ಚರ್ಚೆಯಾಗಿ ಸಂಪುಟದ ಒಪ್ಪಿಗೆ ದೊರೆತ ನಂತರ ಜ. 12ರಂದು ವಿಶೇಷ ಭೂಸ್ವಾಧೀನಕ್ಕೆ ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಖಾಲಿ ಜಾಗ ಮತ್ತು ಕಟ್ಟಡ ಸೇರಿ ಒಟ್ಟು ₹50 ಲಕ್ಷಕ್ಕೆ ಖರೀದಿಸಲು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿ ಜ. 12ರಂದು ಆದೇಶ ಹೊರಡಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ₹25 ಲಕ್ಷ ಬಿಡುಗಡೆಯಾಗಿದೆ.

₹1.15 ಕೋಟಿಗಳಲ್ಲಿ ಖರೀದಿ: ಕಳೆದ ವರ್ಷ ಸಾಮೂಹಿಕ ಪ್ರಾಚ್ಯವಸ್ತು ಸಂಗ್ರಹಕ್ಕೆ ಎಚ್.ಕೆ. ಪಾಟೀಲ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ 2000ಕ್ಕೂ ಅಧಿಕ ಪ್ರಾಚ್ಯವಸ್ತುಗಳು ಸಿಕ್ಕಿದ್ದವು. ಗ್ರಾಮದ ಅನೇಕ ಜನರು ಬೆಳ್ಳಿ ನಾಣ್ಯ, ತಾಮ್ರದ ಐತಿಹಾಸಿಕ ವಸ್ತುಗಳನ್ನು ಸರ್ಕಾರಕ್ಕೆ ನೀಡಿದ್ದರು. ಬಯಲು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಲಕ್ಕುಂಡಿ ಗ್ರಾಮದಲ್ಲಿ ಭೂಸ್ವಾಧೀನ ಅಗತ್ಯವಿತ್ತು. ಹೀಗಾಗಿ ಲಕ್ಕುಂಡಿ ಗ್ರಾಮದ ಸರ್ವೇ ನಂ. 2/1ರ 1.38 ಎಕರೆ ಹಾಗೂ ಸರ್ವೇ ನಂ. 2/9ರ 1.03 ಎಕರೆ ಜಮೀನನ್ನು ಸರಾಸರಿ ₹1.15 ಕೋಟಿಗಳಲ್ಲಿ ಖರೀದಿಸಲು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿ ಆದೇಶಿಸಲಾಗಿದೆ.

ಉತ್ಖನನ ಸ್ಥಳದ ವಿಶೇಷತೆ: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಮತ್ತು ಸಿದ್ದರ ಬಾವಿಗೆ ಸಂಪರ್ಕ ಇತ್ತು ಎಂದು ಇತಿಹಾಸದಲ್ಲಿ ಉಲ್ಲೇಖಗಳಿವೆ. ಕಾಲ ಕಳೆದಂತೆ ಸಂಪರ್ಕವು ಮಣ್ಣಿನಲ್ಲಿ ಹುದುಗಿ ಹೋಗಿದೆ. ಇನ್ನು ಉತ್ಖನನ ನಡೆಯುವ ಸ್ಥಳದ ಪಕ್ಕದ ಖಾಲಿ ಜಾಗದಲ್ಲಿ ಈ ಹಿಂದೆ ಗ್ರಾಮದಲ್ಲಿ ನಾಟಕ ಪ್ರದರ್ಶನದ ವೇಳೆ ಭೂಮಿ ಅಗೆಯುವ ಸಂದರ್ಭದಲ್ಲಿ ಕಟ್ಟಡದ ಅವಶೇಷಗಳು ದೊರೆತಿದ್ದವು. ಈಗ ಅದೇ ಸ್ಥಳದಲ್ಲಿಯೇ ಉತ್ಖನನ ಪ್ರಾರಂಭವಾಗಲಿದೆ.ವಾಸ್ತುಶಿಲ್ಪ ವೈಭವ: ಲಕ್ಕುಂಡಿಯಲ್ಲಿ ಈ ಹಿಂದೆಯೇ ಉತ್ಖನನ ಆರಂಭವಾಗಬೇಕಿತ್ತು. ಆದರೆ ಮಳೆ ಮತ್ತು ಮಣ್ಣಿನ ತೇವಾಂಶದ ಕಾರಣದಿಂದ ತಜ್ಞರ ಸಲಹೆ ಮೇರೆಗೆ ಕೆಲಕಾಲ ತಡೆಹಿಡಿಯಲಾಗಿತ್ತು. ಜ. 16ರಿಂದ) ಉತ್ಖನನ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಲಕ್ಕುಂಡಿಯಲ್ಲಿ ನಿಧಿ, ಬಂಗಾರ, ಮುತ್ತು, ರತ್ನ ಸಿಗುವುದು ಸಾಮಾನ್ಯ. ಆದರೆ ಅದಕ್ಕಿಂತ ಬೆಲೆಬಾಳುವ ವಾಸ್ತುಶಿಲ್ಪ ವೈಭವವನ್ನು ಮರುಸೃಷ್ಟಿ ಮಾಡಿ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಎಲ್ಲ ಸಿದ್ಧತೆ ಆರಂಭಿಸಿದ್ದೇವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ