ಬಳ್ಳಾರಿ: ಬ್ಯಾನರ್ ಗಲಭೆ ಪ್ರಕರಣದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಬಂಧಿಸಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಜ. 17ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಸಮಾವೇಶ ಬಳಿಕ ಮುಂದಿನ ಹಂತದ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು ಎಂದು ವಿಧಾನ ಪರಿಷತ್‌ನ ಬಿಜೆಪಿ ಮುಖ್ಯ ಸಚೇತಕ ಎನ್. ರವಿಕುಮಾರ್ ತಿಳಿಸಿದರು.
ಬ್ಯಾನರ್ ಗಲಭೆ ಬಳಿಕ ಬಳ್ಳಾರಿಗೆ ಬಂದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ನಮ್ಮದು ತಪ್ಪಾಗಿದೆ ಎಂದು ಹೇಳಿದ್ದಾರೆ. ಅವರ ಪಕ್ಷದ ಅನೇಕ ನಾಯಕರು ಬ್ಯಾನರ್ ಗಲಭೆ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಶಾಸಕ ಭರತ್ ರೆಡ್ಡಿ ವಿರುದ್ಧ ಈ ವರೆಗೆ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಭರತ್ ರೆಡ್ಡಿ ಎಲ್ಲ ಪಕ್ಷದವರನ್ನು ಆಹ್ವಾನಿಸಿ ವಾಲ್ಮೀಕಿ ಪ್ರತಿಮೆ ಅನಾವರಣ ಮಾಡಬಹುದಿತ್ತು. ಆದರೆ ಅವರಲ್ಲಿ ದುರುದ್ದೇಶ ಅಡಗಿತ್ತು. ಭರತ್ ಸೂಚನೆ ಮೇರೆಗೇ ಅಂಗರಕ್ಷಕರು ಗುಂಡು ಹೊಡೆದಿದ್ದಾರೆ. ಬ್ಯಾನರ್ ಇಲ್ಲಿ ನೆಪ ಮಾತ್ರ. ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ ಎನ್ನುವ ಸಿದ್ದರಾಮಯ್ಯ ಅವರು ಬಳ್ಳಾರಿಯಲ್ಲಿ ಯಾವ ಸಂವಿಧಾನವಿದೆ ಎಂಬುದನ್ನು ಹೇಳಬೇಕು. ಬಳ್ಳಾರಿ ನಗರವನ್ನು ಸುಟ್ಟು ಹಾಕುತ್ತಿದ್ದೆ ಎಂದು ಶಾಸಕ ಭರತ್ ರೆಡ್ಡಿ ಹೇಳಿದ್ದರು. ಅದೇ ಮಾತು ಬಿಜೆಪಿಯವರು ಹೇಳಿದ್ದಿದ್ದರೆ ಇಷ್ಟು ಹೊತ್ತಿಗೆ ಬಂಧನವಾಗುತ್ತಿತ್ತು. ಅವರಿಗೆ ಒಂದು ನ್ಯಾಯ ನಮಗೇ ಒಂದು ನ್ಯಾಯವೇ? ಭರತ್ ರೆಡ್ಡಿ ಅವರನ್ನು ದ್ವೇಷ ಭಾಷಣ ಕಾಯಿದೆ ಅಡಿಯಲ್ಲೂ ಬಂಧಿಸಬೇಕಾಗುತ್ತದೆ’ಎಂದು ರವಿಕುಮಾರ್ ಹೇಳಿದರು.2028ರ ಬಳಿಕ ಎನ್‌ಡಿಎಯಿಂದ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಮೈತ್ರಿಕೂಟ ತೀರ್ಮಾನ ಮಾಡುತ್ತದೆ ಎಂದು ರವಿಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ನಾವು ಸಿದ್ಧರಿದ್ದೇವೆ. ಕಾಂಗ್ರೆಸ್ ಸರ್ಕಾರದ ವೈಫಲ್ಯ ಜನರ ಮುಂದಿಡಲಿದ್ದೇವೆ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಮುಂಬೈ ಮಹಾನಗರ ಪಾಲಿಕೆಯೂ ಎನ್‌ಡಿಎ ತೆಕ್ಕೆಗೆ ಸಿಗಲಿದೆ ಎಂದು ಅವರು ಹೇಳಿದರು.ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಬಳ್ಳಾರಿ ಎಪಿಸಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಸಮಾವೇಶ ನಡೆಯಲಿದ್ದು, 20–30 ಸಾವಿರ ಜನ ಸೇರಲಿದ್ದಾರೆ. ಅಂದು ಬಿಜೆಪಿ ಕೋರ್ ಕಮಿಟಿಯ ಎಲ್ಲ ಸದಸ್ಯರೂ ಆಗಮಿಸಲಿದ್ದು, ಅದೇ ದಿನ ಸಭೆ ನಡೆಸಿ, ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುತ್ತದೆ. ಪಾದಯಾತ್ರೆಯ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಸಮಾವೇಶ ನಡೆಯಲಿದೆ ಎಂದರು. ಮೈದಾನದಲ್ಲಿ ಸಮಾವೇಶಕ್ಕಿಲ್ಲ ಅವಕಾಶ-ಎಪಿಎಂಸಿ ಬಳಿ ಸ್ಥಳಾಂತರ: ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಾರಾ ಭರತ್ ರೆಡ್ಡಿ ಬಂಧಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವ ಜಿಲ್ಲಾ ಬಿಜೆಪಿಗೆ ನಗರದ ಪ್ರಮುಖ ವೃತ್ತಗಳು ಹಾಗೂ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ನೀಡಲಾಗಿಲ್ಲ. ಹೀಗಾಗಿ ಎಪಿಎಂಸಿ ಬಳಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಂಡಿದೆ. ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕೆ ಕಾಲೇಜು ಶಿಕ್ಷಣ ಇಲಾಖೆ ಸಮ್ಮತಿ ನೀಡಿಲ್ಲ. ಸಾರ್ವಜನಿಕ ಸ್ಥಳಗಳಾದ ಗಡಗಿ ಚನ್ನಪ್ಪ ವೃತ್ತ ಹಾಗೂ ಮೋತಿ ವೃತ್ತಗಳಲ್ಲಿ ಸಮಾವೇಶ ನಡೆಸಲು ಸಹ ಅನುಮತಿ ಸಿಕ್ಕಿಲ್ಲ. ಹೀಗಾಗಿ ಅಂತಿಮವಾಗಿ ಎಪಿಎಂಸಿಗೆ ಸಮಾವೇಶ ಜಾಗವನ್ನು ಸ್ಥಳಾಂತರಿಸಲಾಗಿದೆ. ಮುನ್ಸಿಪಲ್ ಕಾಲೇಜಿನಲ್ಲಿ ನಮಗೆ ಅನುಮತಿ ದೊರೆಯಲಿದೆ ಎಂದುಕೊಂಡಿದ್ದೆವು. ಆದರೆ, ನಿರಾಕರಿಸಲಾಗಿದೆ. ನಿರಾಕರಣೆ ಪತ್ರವನ್ನು ನಾವೂ ಇಟ್ಟುಕೊಂಡಿರುತ್ತೇವೆ. ಮುಂದಿನ ದಿನಗಳಲ್ಲಿ ಸಹ ಅಲ್ಲಿ ಯಾವುದೇ ಪಕ್ಷಕ್ಕೆ ಸಮಾವೇಶ ನಡೆಸಲು ಅನುಮತಿ ನೀಡುವಂತಿಲ್ಲ. ನೀಡಿದರೆ ಹೋರಾಟ ನಡೆಸುತ್ತೇವೆ ಎಂದು ಪಕ್ಷದ ಮುಖಂಡರೊಬ್ಬರು ''''ಕನ್ನಡಪ್ರಭ''''ಕ್ಕೆ ತಿಳಿಸಿದರು.
ಜ.17ರ ಪ್ರತಿಭಟನಾ ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಪಕ್ಷದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದು, ಹೋಬಳಿ ಹಂತದ ನಾಯಕರಿಗೂ ಜನರನ್ನು ಕರೆತರುವ ಜವಾಬ್ದಾರಿ ನೀಡಲಾಗಿದೆ.