ಗುತ್ತಲ: ಸಮೀಪದ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವಚನಗ್ರಂಥ ಮಹಾರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಮಧ್ಯ ಸಂಭ್ರಮದಿಂದ ಜರುಗಿತು.
ಅಂಬಿಗರ ಚೌಡಯ್ಯನವರ ಪೀಠದ ಮುಂಭಾಗದಲ್ಲಿರುವ ತುಂಗಭದ್ರಾ ನದಿಗೆ ಗಂಗಾಪೂಜೆ ನೆರವೇರಿಸಿದ ನಂತರ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ವಿಶೇಷವಾಗಿ ಎಲ್ಲ ರಥಗಳಲ್ಲಿ ದೇವರ ಮೂರ್ತಿ ಇಡುವದು ಸಾಮಾನ್ಯ. ಆದರೆ ಇಲ್ಲಿ ವಚನ ಗ್ರಂಥ ಇಟ್ಟು ರಥವನ್ನು ಜೈ ಅಂಬಿಗ ಜೈ ಜೈ ಅಂಬಿಗ ಎನ್ನುವ ಜೈಕಾರದಿಂದ ಭಕ್ತರು ಭಕ್ತಿ ಭಾವದಿಂದ ರಥವನ್ನು ಎಳೆದುಕೊಂಡು ಸಾಗುವಾಗ ರಥದ ಕಳಸಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆಯತ್ತಾ ಅಂಬಿಗ ಅಂಬಿಗ ಜೈ ಜೈ ಅಂಬಿಗ ಎನ್ನುವ ಜೈಕಾರ ಭಕ್ತರನ್ನು ಭಕ್ತಿ ಪರವಶರನ್ನಾಗಿ ಮಾಡಿತು, ಶ್ರೀ ಶಾಂತಮುನಿ ಮಹಾಸ್ವಾಮಿಗಳ ಗದ್ದುಗೆಯವರಿಗೆ ರಥವನ್ನು ಎಳೆಯಲಾಯಿತು. ಮುಂಜಾನೆಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಮಹಾರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು.
ಜಾತ್ರೆಯ ಮೆರವಣಿಗೆಯಲ್ಲಿ ಝಾಂಜಮೇಳ, ಡೊಳ್ಳು, ಇನ್ನು ಅನೇಕ ವಾದ್ಯಗಳು ನೋಡುಗರನ್ನು ಮನಸೆಳೆಯುವಂತೆ ಮಾಡಿದವು. ಜಾತ್ರೆಗೆ ಆಗಮಸಿದ ಭಕ್ತಾದಿಗಳಿಗೆ ಪ್ರಸಾದಕ್ಕಾಗಿ ರೊಟ್ಟಿ, ಮುಳಗಾಯಿ ಪಲ್ಯೆ, ಕಡ್ಲಿಕಾಳು ಪಲ್ಯ, ಗೋದಿಹುಗ್ಗಿ, ಅನ್ನ ಸಾರು ವ್ಯವಸ್ಥೆ ಮಾಡಲಾಗಿತ್ತು. ಮಹಾ ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಹುಮ್ಮಸಿನಿಂದ ಭಾಗವಹಿಸಿದ್ದರು.