ಭರ್ಜರಿ ಮಳೆಗೆ ರಾಜ್ಯದಲ್ಲಿ ಗುರಿ ಮೀರಿ ಬಂಪರ್‌ ಬಿತ್ತನೆ

KannadaprabhaNewsNetwork |  
Published : Jun 08, 2025, 01:16 AM ISTUpdated : Jun 08, 2025, 04:58 AM IST
ರೈತ | Kannada Prabha

ಸಾರಾಂಶ

ರಾಜ್ಯದಲ್ಲಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. 2.86 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತಾದರೂ ಇದೀಗ 3.06 ಲಕ್ಷ ಹೆಕ್ಟೇರ್‌ನಲ್ಲಿ (ಶೇ.107) ಬಿತ್ತನೆಯಾಗಿದೆ.

 ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ರಾಜ್ಯದಲ್ಲಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. 2.86 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತಾದರೂ ಇದೀಗ 3.06 ಲಕ್ಷ ಹೆಕ್ಟೇರ್‌ನಲ್ಲಿ (ಶೇ.107) ಬಿತ್ತನೆಯಾಗಿದೆ.

ಮಾ.1ರಿಂದ ಮೇ 31ರವರೆಗಿನ ಪೂರ್ವ ಮುಂಗಾರಿನ ಅವಧಿಯಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು, ಕರಾವಳಿ ಭಾಗದಲ್ಲೂ ಅಧಿಕ ಮಳೆಯಾಗಿದೆ. ಇದರಿಂದಾಗಿ ಈ ಬಾರಿ ತುಮಕೂರು, ಮಂಡ್ಯ, ಹಾಸನ, ಚಿತ್ರದುರ್ಗ, ಚಾಮರಾಜನಗರ ಮತ್ತಿತರ ಜಿಲ್ಲೆಗಳಲ್ಲಂತೂ ಬಿತ್ತನೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ತುಮಕೂರು ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಅಂದಾಜಿತ್ತು. ಆದರೆ, 16 ಸಾವಿರ ಹೆಕ್ಟೇರ್‌ನಲ್ಲಿ ಅಂದರೆ 8 ಪಟ್ಟು ಅಧಿಕ ಬಿತ್ತನೆ ಆಗಿದೆ. ಮಂಡ್ಯದಲ್ಲಿ 18 ಸಾವಿರ ಹೆಕ್ಟೇರ್‌ ಬಿತ್ತನೆಗೆ ಬದಲಾಗಿ 24 ಸಾವಿರ ಹೆಕ್ಟೇರ್‌, ಹಾಸನದಲ್ಲಿ 20 ಸಾವಿರ ಹೆಕ್ಟೇರ್‌ಗೆ ಬದಲಾಗಿ 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಜೋಳ, ಹುರುಳಿ, ಶೇಂಗಾ ಅಧಿಕ:

ಜೋಳ, ಮೆಕ್ಕೆಜೋಳ, ರಾಗಿ ಸೇರಿ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಏಕದಳ ಧಾನ್ಯಗಳ ಬಿತ್ತನೆ ನಿರೀಕ್ಷಿಸಲಾಗಿತ್ತಾದರೂ 89 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹಾಗೆಯೇ ತೊಗರಿ, ಹುರುಳಿ, ಉದ್ದು, ಅಲಸಂದೆ ಮತ್ತಿತರ ದ್ವಿದಳ ಧಾನ್ಯಗಳನ್ನು 63 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತುವ ಗುರಿ ಇತ್ತು. ಆದರೆ ಬರೋಬ್ಬರಿ 1.24 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಶೇಂಗಾ, ಎಳ್ಳು, ಸೂರ್ಯಕಾಂತಿ ಸೇರಿ 34 ಸಾವಿರ ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬೆಳೆಗಳ ಬಿತ್ತನೆ ಗುರಿಗೆ ಬದಲಾಗಿ 85 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ವಾಣಿಜ್ಯ ಬೆಳೆಗಳ ಬಿತ್ತನೆಯಲ್ಲಿ ಮಾತ್ರ ಹಿನ್ನಡೆ ಉಂಟಾಗಿದೆ. ಹತ್ತಿ, ಕಬ್ಬು, ತಂಬಾಕನ್ನು 1.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇತ್ತು. ಆದರೆ 1.10 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.79 ರಷ್ಟು ಮಾತ್ರ ಗುರಿ ಸಾಧನೆಯಾಗಿದೆ.ಮಳೆಯ ಪ್ರಮಾಣ ದ್ವಿಗುಣ

ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು, ಕರಾವಳಿ ಸೇರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು ಸಹ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಅಧಿಕವಾಗಲು ಕಾರಣವಾಗಿದೆ. ದಕ್ಷಿಣ ಒಳನಾಡಿನಲ್ಲಿ 138 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 229 ಮಿ.ಮೀ. ಮಳೆಯಾಗಿದೆ. ಅಂದರೆ ಎರಡು ಪಟ್ಟಿಗೂ ಹೆಚ್ಚು ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ 79 ಮಿ. ಮೀ.ಗೆ ಬದಲಾಗಿ 189 ಮಿ.ಮೀ. ಮಳೆಯಾಗಿದೆ. ಮಲೆನಾಡಿನಲ್ಲಿ 163 ಮಿ.ಮೀ.ಗೆ ಬದಲಾಗಿ 443 ಮಿ.ಮೀ. ಮಳೆ ಸುರಿದಿದೆ. ಕರಾವಳಿಯಲ್ಲಂತೂ ಭಾರೀ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ. 156 ಮಿ.ಮೀ.ಗೆ ಬದಲಾಗಿ ಬರೋಬ್ಬರಿ 707 ಮಿ.ಮೀ. ಮಳೆ ಬಿದ್ದಿದೆ.ಕಳೆದ ಸಾಲಿನಲ್ಲಿ ಶೇ.84 ಮಾತ್ರ ಸಾಧನೆ

2023-24ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ 2.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ 2.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.84 ರಷ್ಟು ಮಾತ್ರ ಸಾಧನೆಯಾಗಿತ್ತು. ಮಾರ್ಚ್‌ನಿಂದ ಮೇವರೆಗಿನ ಅವಧಿಯಲ್ಲಿ 115 ಮಿ.ಮೀ. ಮಳೆ ನಿರೀಕ್ಷಿಸಲಾಗಿತ್ತು. ಆದರೆ 116 ಮಿ.ಮೀ. ಮಳೆಯಾಗಿದ್ದರೂ ಬಿತ್ತನೆಗೆ ಪೂರಕವಾದ ಸಮಯದಲ್ಲಿ ಮಳೆ ಬಾರದೆ ಬಿತ್ತನೆ ಕಡಿಮೆಯಾಗಿತ್ತು. ಅದರಲ್ಲೂ ಏಪ್ರಿಲ್‌ ತಿಂಗಳಿನಲ್ಲಂತೂ ಮಳೆಯ ಪ್ರಮಾಣ ಶೇ.14 ರಷ್ಟು ಕಡಿಮೆ ಆಗಿದ್ದು, ಬಿತ್ತನೆ ಕುಂಠಿತವಾಗಲು ಕಾರಣವಾಗಿತ್ತು.ಜೂ.11ರಿಂದ ಮಳೆ ಹೆಚ್ಚಳ ಸಾಧ್ಯತೆ

ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ಬಿತ್ತನೆಯೂ ಅಧಿಕವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ, ಹತ್ತಿ ಹೆಚ್ಚಾಗಿ ಬೆಳೆದಿದ್ದು ಅಂತರ ಬೆಳೆಯಾಗಿ ಎಸರು, ಉದ್ದು ಬಿತ್ತಲಾಗಿದೆ. ಕಳೆದ ಒಂದು ವಾರದಿಂದ ಮಳೆ ಬಂದಿಲ್ಲ. ಆದರೆ ಭೂಮಿಯಲ್ಲಿ ತೇವಾಂಶ ಇರುವುದರಿಂದ ಈ ಬೆಳೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹವಾಮಾನ ತಜ್ಞ ಎಂ.ಎನ್‌.ತಿಮ್ಮೇಗೌಡ ಸ್ಪಷ್ಟಪಡಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದ ವಿಷಯಕ್ಕೆ ಬಂದರೆ ಚಾಮರಾಜನಗರ ಜಿಲ್ಲೆಯಲ್ಲಿ ಹತ್ತಿ, ಮೈಸೂರಿನಲ್ಲಿ ಹೆಚ್ಚಾಗಿ ತಂಬಾಕು ಹಾಕಲಾಗಿದೆ. ಈ ಎರಡೂ ಜಿಲ್ಲೆಯಲ್ಲಿ ಅಂತರ ಬೆಳೆಯಾಗಿ ಅವರೆ, ಅಲಸಂದೆ, ಉದ್ದು, ಹೆಸರು ಬಿತ್ತುತ್ತಾರೆ. ಜೂ.11 ರಿಂದ ಮಳೆ ಚುರುಕಾಗುವ ಸಾಧ್ಯತೆ ಇದ್ದು ಬೆಳೆಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಅವರು ವಿವರಿಸಿದ್ದಾರೆ.ಪೂರ್ವ ಮುಂಗಾರು ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ)

ವಲಯ ವಾಡಿಕೆ ವಾಸ್ತವ

ದಕ್ಷಿಣ ಒಳನಾಡು 138 229

ಉತ್ತರ ಒಳನಾಡು 79 189

ಮಲೆನಾಡು 163 443

ಕರಾವಳಿ 156 707

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ