ತ್ಯಾಗ ಬಲಿದಾನ ಪರಸ್ಪರ ಪ್ರೀತಿಯ ಸಮ್ಮಿಲನವೇ ಬಕ್ರೀದ್

Published : Jun 07, 2025, 11:43 AM IST
Bakrid festival

ಸಾರಾಂಶ

ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಅತಿ ಬಹುಮುಖ್ಯ ಎರಡು ಹಬ್ಬಗಳೆಂದರೆ ಬಕ್ರೀದ್ ಮತ್ತು ರಂಜಾನ್ ಅತ್ಯಂತ ಪವಿತ್ರ ಹಬ್ಬ ಎಂದು ಪರಿಗಣಿಸಲಾಗುತ್ತದೆ.

 ಜಗದೀಶ.ಎಸ್.ಗಿರಡ್ಡಿ, ಲೇಖಕರು. ಗೊರಬಾಳ.

ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಅತಿ ಬಹುಮುಖ್ಯ ಎರಡು ಹಬ್ಬಗಳೆಂದರೆ ಬಕ್ರೀದ್ ಮತ್ತು ರಂಜಾನ್ ಅತ್ಯಂತ ಪವಿತ್ರ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಬಕ್ರೀದ್ ಹಬ್ಬಕ್ಕೆ ಸುಮಾರು 5000 ವರ್ಷದ ಇತಿಹಾಸವಿದೆ. ಬಕ್ರೀದ್ ಹಬ್ಬದ ವಿಶೇಷವೆಂದರೆ ತ್ಯಾಗ, ಬಲಿದಾನ, ಆಹಾರ ದಾನದ ಸಮ್ಮಿಲನ ಮತ್ತು ಅಸ್ಮರಣೀಯ ಘಟನೆ ನೆನಪಿಸುವ ಹಬ್ಬವಾಗಿದೆ.

5000 ವರ್ಷಗಳ ಹಿಂದೆ ಪ್ರವಾದಿ ಮಮ್ಮದರಲ್ಲಿ ಓರ್ವರಾದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಮತ್ತು ಬಲಿದಾನ ನೆನಪಿಸುವಂತಹ ಒಂದು ಪವಿತ್ರವಾದ ಸಾಕ್ಷಿಯೇ ಬಕ್ರೀದ್. ಇಸ್ಲಾಮಿನ ಪ್ರಕಾರ ಏಕದೇವೋಭವ ವೃತವನ್ನು ಕಡ್ಡಾಯವಾಗಿ ಆಚರಣೆ ಮಾಡಿ ಪ್ರವಾದಿ ಇಬ್ರಾಹಿಂ ಅವರು ತಮ್ಮ ಶತ್ರುವಿನ ಅಗ್ನಿಕುಂಡದಲ್ಲಿ 7 ದಿನ ಕಳೆದರು. ಇಬ್ರಾಹಿಂ ಅವರು ಮಕ್ಕಳಿಲ್ಲದ ಕೊರಗನ್ನು ಅನುಭವಿಸುತ್ತಾ ಸಾಕಷ್ಟು ನೋವು ನಲಿವುಗಳು ಬಂದವು. 

ಸುಮಾರು ನೂರು ವರ್ಷದ ಆಸುಪಾಸಿನಲ್ಲಿ ಇರುವಾಗ ಅಲ್ಲಾನು ಪ್ರತ್ಯಕ್ಷನಾಗಿ ಒಂದು ಗಂಡು ಮಗುವನ್ನು ಕರುಣಿಸುತ್ತಾನೆ. ಆ ಮಗನಿಗೆ ಇಸ್ಮಾಯಿಲ್ ಎಂದು ನಾಮಕರಣ ಮಾಡಿದರು. ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಹಜ್‌ಗೆ ಹೋದಾಗ ಧಾರ್ಮಿಕ ಕ್ಷೇತ್ರದಲ್ಲಿ ಅಲ್ಲಾನು ‘ನಿನ್ನ ಮಗುವನ್ನು ಇಲ್ಲಿಯೇ ಬಿಡಬೇಕು’ ಎಂದು ಆಜ್ಞೆ ಮಾಡಿದಾಗ ಪ್ರವಾದಿ ಇಬ್ರಾಹಿಂ, ಅಲ್ಲಾನು ಕರುಣಿಸಿದ ಮಗು ‘ನಿನಗೆ ಇರಲಿ’ ಎಂದು ಒಪ್ಪಿಕೊಳ್ಳುತ್ತಾರೆ. ಇಷ್ಟಾಗಿಯೂ ಅಲ್ಲಾನು ಇಬ್ರಾಹಿಂ ಅವರ ಭಕ್ತಿಯನ್ನು ಪರೀಕ್ಷಿಸುವುದಕ್ಕಾಗಿ ಮತ್ತೊಂದು ಆಜ್ಞೆ ಮಾಡುತ್ತಾನೆ. 

ಏನೆಂದರೆ ‘ನಿನ್ನ ಮಗ ಇಸ್ಮಾಯಿಲ್ಲನನ್ನು ಬಲಿ ಕೊಡಬೇಕು’ ಎಂದು ಇಬ್ರಾಹಿಂ ಅವರಿಗೆ ಹೇಳಿದಾಗ ಇಬ್ರಾಹಿಂ ಅವರು, ‘ಆಯಿತು’ ಎಂದು ಒಪ್ಪಿಕೊಳ್ಳುತ್ತಾರೆ. ನಂತರ ತಂದೆಯಿಂದಲೇ ಮಗನ ಶಿರಚ್ಚೇಧ ಆಗಬೇಕು ಎಂದು ಅಲ್ಲಾನು ಆಜ್ಞೆ ಮಾಡುತ್ತಾನೆ. ಆಗ ಪ್ರವಾದಿ ಇಬ್ರಾಹಿಂ ಕತ್ತಿ ತೆಗೆದುಕೊಂಡು ಬಂದು ಇಸ್ಮಾಯಿಲ್ಲನ ಕುತ್ತಿಗೆ ಕೊಯ್ಯಲು ಹೋದಾಗ ಆತನು ಹಿಡಿದ ಕತ್ತಿಗೆ ಇಸ್ಮಾಯಿಲ್ಲನ ಕುತ್ತಿಗೆ ಕೊಯ್ಯುವುದಿಲ್ಲ. ಆಗ ಇಸ್ಮಾಯಿಲ್ಲನು ತಂದೆಗೆ ಹೇಳುತ್ತಾನೆ, ‘ನಿನಗೆ ಪುತ್ರ ವಾತ್ಸಲ್ಯಕ್ಕಾಗಿ ನನ್ನ ಕುತ್ತಿಗೆ ಕಡೆಯಲಿಕ್ಕೆ ಆಗುತ್ತಿಲ್ಲ. ಹಾಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನನ್ನ ಕುತ್ತಿಗೆ ಕೊಯ್ಯಿ’ ಎಂದು ಹೇಳಿದನು. ಮಗನ ಆಜ್ಞೆ ಪಾಲಿಸಲು ತಂದೆ ಮುಂದಾದಾರು. 

ಅವಾಗಲೂ ಮಗನ ಕುತ್ತಿಗೆ ಕೊಯ್ಯುವುದಿಲ್ಲವೋ ಅವಾಗ ಅಲ್ಲಾನು ಪ್ರತ್ಯಕ್ಷನಾಗಿ ‘ನಿನ್ನ ಮಗನನ್ನು ನೀನು ಎಷ್ಟೇ ಕಡಿದರೂ ಆತನ ಕುತ್ತಿಗೆ ಕೊಯ್ಯುವುದಿಲ್ಲ’ ಎಂದು ಆಶೀರ್ವದಿಸಿದನು. ಅಲ್ಲಾನು, ‘ನಿನ್ನ ಭಕ್ತಿಯನ್ನು ಪರೀಕ್ಷೆ ಮಾಡಿದೆ. ಈಗ ಈ ಆಜ್ಞೆ ಹಿಂದೆ ತೆಗೆದುಕೊಳ್ಳುತ್ತೇನೆ. ಇದಕ್ಕೆ ಪರ್ಯಾಯವಾಗಿ ನೀನು ಒಂದು ಕುರಿಮರಿಯನ್ನು ಬಲಿ ಕೊಡಬೇಕು’ ಎಂದು ಆದೇಶಿಸುತ್ತಾನೆ. ಹಾಗೆ ಕುರಿಮರಿ ಬಲಿ ಕೊಟ್ಟಿದ್ದಕ್ಕಾಗಿ ಬಕ್ರೀದ್ ಹಬ್ಬ ಪ್ರಾರಂಭ ಆಯಿತು.

 ಬಕ್ಕರ್ ಎಂದರೆ ಆಡು, ಈದ ಎಂದರೆ ಹಬ್ಬ. ಹೀಗಾಗಿ ಆಡನ್ನು ಬಲಿ ಕೊಡುವುದೇ ಬಕ್ರೀದ್ ಹಬ್ಬ ಎಂದು ಕರೆಯಲಾಗುವುದು. 5,000 ವರ್ಷಗಳ ಹಿಂದೆ ಮಕ್ಕಾದಲ್ಲಿ ನಡೆದ ಈ ಒಂದು ಘಟನೆಗೆ ಸಾಕ್ಷಿ ಎಂಬಂತೆ ಪವಿತ್ರ ಬಕ್ರೀದ್ ಹಬ್ಬ ಆಚರಿಸಲು ಮುಸ್ಲಿಮರು ಮೆಕ್ಕಾ ತೆರಳಲು ಅತ್ಯಂತ ಉತ್ಸುಕರಾಗಿರುತ್ತಾರೆ. ಮೆಕ್ಕಾದಲ್ಲಿ ಬಕ್ರೀದ್ ಹಬ್ಬವನ್ನು ವಿಶಿಷ್ಟ, ವಿಶೇಷ ಮತ್ತು ವಿಭಿನ್ನವಾಗಿ ಆಚರಣೆ ಮಾಡುವುದರಿಂದ ಮುಸ್ಲಿಂ ಆಗಿ ಹುಟ್ಟಿದ ಪ್ರತಿಯೊಬ್ಬರೂ ಪವಿತ್ರ ಹಜ್ ಯಾತ್ರೆ ಮೂಲಕ ಮೆಕ್ಕಾಕ್ಕೆ ಜೀವನದಲ್ಲಿ ಒಮ್ಮೆಯಾದರೂ ತೆರಳಬೇಕು ಎನ್ನುವ ಸಂಕಲ್ಪ ಮಾಡಿರುತ್ತಾರೆ. ಮೆಕ್ಕಾದಲ್ಲಿ ಸಮಾನತೆ:

ಇನ್ನೊಂದು ಮುಖ್ಯ ವಿಶೇಷ ಎಂದರೆ ಪ್ರತಿಯೊಬ್ಬರೂ ಒಂದೇ ಮಾದರಿಯ ಬಟ್ಟೆಯನ್ನು ಧರಿಸಿ ನಮಾಜ್‌ಗೆ ಹೋಗುವುದು ಕಡ್ಡಾಯವಾಗಿದೆ. ಅಲ್ಲಾನ ದೃಷ್ಟಿಯಲ್ಲಿ ಶ್ರೀಮಂತರು, ಬಡವರು ಎನ್ನುವ ಭೇದಭಾವ ಇಲ್ಲದೆ ಎಲ್ಲರೂ ಸಮಾನರು ಎನ್ನುವ ಸಂದೇಶ ಸಾರುವ ಸಲುವಾಗಿ ಅಲ್ಲಾನ ಆಜ್ಞೆಯಂತೆ ಮೆಕ್ಕಾಕ್ಕೆ ಬರುವ ಪ್ರತಿಯೊಬ್ಬರು ಒಂದೇ ತರದ ಬಟ್ಟೆಯನ್ನು ಧರಿಸಬೇಕು ಎಂಬ ನಿಯಮವಿದೆ. ಮೆಕ್ಕಾದ ಹಜ್ ನಿಯಮಕ್ಕೆ ಯಾರೂ ಭಂಗ ಬರದಂತೆ ಮುಸ್ಲಿಮರು ನಡೆದುಕೊಳ್ಳುತ್ತಿದ್ದು, ಅಲ್ಲಾನ ವಿಷಯ ಬಂದಾಗ ಎಲ್ಲ ಮುಸ್ಲಿಮರು ಸಮಾನತೆ, ಏಕತೆ ಕಂಡು ಅಲ್ಲಾನ ಕೃಪೆಗೆ ಪಾತ್ರರಾಗುತ್ತಾರೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ